Advertisement

ವಿಶ್ವನಾಥ್‌ಗೆ ಜೆಡಿಎಸ್‌ ಪ್ರಚಾರ ನೇತೃತ್ವ

10:38 AM Aug 29, 2017 | Team Udayavani |

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಘಟಕ ಪುನಾರಚನೆ ಮಾಡಿರುವ ಜೆಡಿಎಸ್‌, ಇದೇ ಮೊದಲ ಬಾರಿಗೆ ಪ್ರಚಾರ ಸಮಿತಿ ಎಂಬ ಹೊಸ ಹುದ್ದೆ ಸೃಷ್ಟಿಸಿ ಎಚ್‌.ವಿಶ್ವನಾಥ್‌ಗೆ ಸಾರಥ್ಯ ವಹಿಸಿದೆ.

Advertisement

ಮಾಜಿ ಸಚಿವ ಬಂಡೆಪ್ಪ ಕಾಶಂಪುರ್‌ಗೆ ಸಂಸದೀಯ ಕಾರ್ಯಮಂಡಳಿ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಎಚ್‌ .ಸಿ.ನೀರಾವರಿ ಅವರಿಗೆ ರಾಜ್ಯ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದರ ಜತೆಗೆ ಇತರೆ ಹುದ್ದೆಗಳಲ್ಲಿ ಅಲ್ಪಸಂಖ್ಯಾತ, ದಲಿತ ಹಾಗೂ ಹಿಂದುಳಿದ ವರ್ಗದವರಿಗೆ ಸ್ಥಾನಮಾನ ನೀಡುವ ಮೂಲಕ ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ “ಟಾಂಗ್‌’ ನೀಡಲಾಗಿದೆ.

ಐಡಿಯಾ ಲಾಗ್‌: ಎಚ್‌.ವಿಶ್ವನಾಥ್‌ ಅವರಿಗೆ ಪ್ರಚಾರ ಸಮಿತಿ ಜತೆಗೆ ಐಡಿಯಾ ಲಾಗ್‌ ಎಂಬ ಹೊಸ ಹುದ್ದೆ ಸೃಷ್ಟಿಸಿ ನೀಡಲಾಗಿದ್ದು ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಯುವಸಮೂಹ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುವ ಜವಾಬ್ದಾರಿ ವಹಿಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಣಾ ತಂಡ ರಚಿಸಲಾಗಿದ್ದು, ದೇವೇಗೌಡರ ತಂಡದಲ್ಲಿ ಎಚ್‌.ಸಿ.  ನೀರಾವರಿ, ಮಧು ಬಂಗಾರಪ್ಪ, ಜಫ್ರುಲ್ಲಾ ಖಾನ್‌ ಇರಲಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಕಾರ್ಯನಿರ್ವಹಣಾ ತಂಡದಲ್ಲಿ ಬಿ.ಎಂ.ಫ‌ರೂಕ್‌, ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ ಇರಲಿದ್ದಾರೆ. ಏಳು ಮಂದಿ ಮುಖಂಡರಿಗೆ ಮೂರ್‍ನಾಲ್ಕು ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದ್ದು, ಜಿ.ಟಿ.ದೇವೇಗೌಡರಿಗೆ ಮೈಸೂರು, ಮಂಡ್ಯ, ಚಾಮರಾಜನಗರ, ಮಡಿಕೇರಿ, ಬಿ.ಬಿ.ನಿಂಗಯ್ಯ ಅವರಿಗೆ ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ಮಂಗಳೂರು ಉಡುಪಿ, ಕೋನರೆಡ್ಡಿಯವರಿಗೆ ರಾಯಚೂರು, ಯಾದಗಿರಿ, ಬೀದರ್‌, ಕಲಬುರಗಿ, ಮನೋಹರ್‌ ಅವರಿಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಅಲ್ಕೋಡ್‌ ಹನುಮಂತಪ್ಪ ಅವರಿಗೆ ಗದಗ, ಹಾವೇರಿ, ಬಾಗಲಕೋಟೆ, ಬಿಜಾಪುರ, ಪಟೇಲ್‌ ಶಿವರಾಂ ಅವರಿಗೆ ತುಮಕೂರು, ಹಾಸನ, ಚಿಕ್ಕಮಗಳೂರು, ರಾಮನಗರ, ಬೆಮೆಲ್‌ ಕಾಂತರಾಜ್‌ ಅವರಿಗೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳ,  ಬಳ್ಳಾರಿ ಉಸ್ತುವಾರಿ ವಹಿಸಲಾಗಿದೆ. 

ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾಗಿದ್ದ ಶೀಲಾ ನಾಯಕ್‌ ಅವರನ್ನು ಬದಲಿಸಿದ್ದು, ಅರ್ಷಿಯಾ ಅಲಿ ಎಂಬುವರನ್ನು ನೇಮಿಸಲಾಗಿದೆ. ಇವರ ಜೊತೆಗೆ ಮಾಜಿ ಸಚಿವ ದಿವಂಗತ ಎಸ್‌.ಡಿ.ಜಯರಾಂ ಪತ್ನಿ ಪ್ರಭಾವತಿ ಜಯರಾಂ ಅವರನ್ನು ಕಾರ್ಯಾಧ್ಯಕ್ಷೆಯನ್ನಾಗಿ ಮಾಡಲಾಗಿದೆ. ಬೆಂಗಳೂರು ನಗರದ ಉಸ್ತುವಾರಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಅವರಿಗೆ ವಹಿಸಲಾಗಿದ್ದು, ಪರಿಷತ್‌ ಸದಸ್ಯ ಟಿ.ಎ.ಶರವಣ, ಶಾಸಕ ಗೋಪಾಲಯ್ಯ ಹಾಗೂ ನಗರ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌ ಅವರನ್ನು ಸದಸ್ಯರನ್ನಾಗಿ ಮಾಡಲಾಗಿದೆ. ರಾಜ್ಯ ಪದಾಧಿಕಾರಿಗಳಲ್ಲಿ 25 ಉಪಾಧ್ಯಕ್ಷರು, 26 ಪ್ರಧಾನ ಕಾರ್ಯದರ್ಶಿ, 12 ಕಾರ್ಯದರ್ಶಿ, 25 ಜಂಟಿ ಕಾರ್ಯದರ್ಶಿ, 47 ಸಂಘಟನಾ ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ. ಕಾರ್ಯಕಾರಿ ಸಮಿತಿ ಆದಷ್ಟು ಶೀಘ್ರ ಪ್ರಕಟಿಸುವುದಾಗಿ ತಿಳಿಸಲಾಗಿದೆ.

ಮ್ಯಾಜಿಕ್‌ ನಂಬರ್‌ ತಲುಪುತ್ತೇವೆ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಸರ್ಕಾರ ರಚನೆಯ ಮ್ಯಾಜಿಕ್‌ ನಂಬರ್‌ ತಲುಪುತ್ತೇವೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಯಾವುದೇ ಸಂದರ್ಭದಲ್ಲಿ ಬಂದರೂ ಎದುರಿಸಲು ಸಜ್ಜಾಗಿದ್ದು ವಿಶ್ರಾಂತಿ ಮಾತೇ ಇಲ್ಲ ಎಂದರು. ಸೆಪ್ಟೆಂಬರ್‌ನಲ್ಲಿ ಪರಿಶಿಷ್ಟರ ಸಮಾವೇಶ, ಅಕ್ಟೋಬರ್‌ನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಆ ನಂತರ ನವೆಂಬರ್‌ನಲ್ಲಿ ಅಲ್ಪಸಂಖ್ಯಾತರ ಸಮಾವೇಶ ನಡೆಸಲಾಗುವುದು.
ಎಚ್‌.ಡಿ.ಕುಮಾರಸ್ವಾಮಿ ಜತೆ ಎರಡು ದಿನ ಚರ್ಚಿಸಿ ರಾಜ್ಯ ಘಟಕ ಪುನಾರಚನೆ ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಜತೆಗೆ ಹೊಸ ಹುದ್ದೆಗಳನ್ನು ಸೃಷ್ಟಿಸಿ ಸಾಮಾಜಿಕ ನ್ಯಾಯದಡಿ ಎಲ್ಲ ವರ್ಗಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.

Advertisement

ಜಾರ್ಜ್‌ ವಿರುದ್ಧ ಅನ್ವರ್‌ ಶರೀಫ್: ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ವಿರುದ್ಧ ಸರ್ವಜ್ಞನಗರದಲ್ಲಿ ಅನ್ವರ್‌ ಶರೀಫ್ ಎಂಬುವರನ್ನು ಕಣಕ್ಕಿಳಿಸಲು ಜೆಡಿಎಸ್‌ ತೀರ್ಮಾನಿಸಿದೆ ಎಂದು ದೇವೇಗೌಡರು ತಿಳಿಸಿದರು.

ಇಸ್ರೇಲ್‌ನಲ್ಲಿ ನೀರಾವರಿ ಅಧ್ಯಯನ
ನೀರಾವರಿ ಅಧ್ಯಯನಕ್ಕಾಗಿ ಇಸ್ರೇಲ್‌ ಪ್ರವಾಸದಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೋಮವಾರ ಗ್ಯಾಂಗ್‌ ಡಾಂಗ್‌ ವಿಶ್ವವಿದ್ಯಾಲಯದ ತಾಂತ್ರಿಕ ವಿಸ್ತರಣಾ ವಿಭಾಗಕ್ಕೆ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ವಿಶ್ವವಿದ್ಯಾಲಯದ ಕುಲಪತಿ ಹಾಗೂ ಅಧಿಕಾರಿಗಳೊಂದಿಗೆ ಶೈಕ್ಷಣಿಕ ಕಾರ್ಯಕ್ರಮ, ಕೃಷಿ, ನೀರಾವರಿ ಮತ್ತು ಕೈಗಾರಿಕ ಉಪಕರಣಗಳು, ತಂತ್ರಜ್ಞಾನ ಸೇರಿದಂತೆ ಮಾಹಿತಿ ಸಂಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next