ದಾವಣಗೆರೆ: ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಚನ್ನಗಿರಿ ಶಾಸಕ ಶಿವಗಂಗಾ ವಿ. ಬಸವರಾಜ್ ಪತ್ರ ಬರೆದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಬಿಜೆಪಿ ಜೊತೆ ನಿರಂತರವಾಗಿ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿಗೆ ಮುಜುಗರವಾಗುತ್ತಿದೆ. ವರ್ಗಾವಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಹಿ ಮಾಡಿ ಅನುಮೋದಿಸಿ ಆದೇಶ ಹೊರಡಿಸಿದ್ದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಬ್ರೇಕ್ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಎಫ್ ಡಿಎಯನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿ ಕಡೆಯಿಂದ ಆದೇಶ ಮಾಡಿಸಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಅದನ್ನು ತಡೆ ಹಿಡಿಸಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಬೆಂಬಲಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಕಾಂಗ್ರೆಸ್ ಶಾಸಕರುಗಳ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ. ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚನ್ನಗಿರಿ ತಾಲೂಕಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸದೆ, ಬಿಜೆಪಿ ಮಾಜಿ ಶಾಸಕರ ಬೆಂಬಲಿಗನಿಗೆ ಗೆಲುವಿಗೆ ಪರೋಕ್ಷವಾಗಿ ಕಾರಣಕರ್ತರಾಗಿದ್ದಾರೆಂದು ಪತ್ರದಲ್ಲಿ ಆರೋಪಿಸಿದ್ದಾರೆ.
ರಾಜ್ಯ ಅಪೆಕ್ಸ್ ಬ್ಯಾಂಕ್ ಗೆ ಜಿಲ್ಲೆಯಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಲು ಕಾಂಗ್ರೆಸ್ ಶಾಸಕರೊಬ್ಬರ ಪುತ್ರನಿಗೆ ಅವಕಾಶವಿದ್ದರೂ ಉಸ್ತುವಾರಿ ಸಚಿವರು ಬಿಜೆಪಿಯವರನ್ನು ಬೆಂಬಲಿಸಿದ್ದಾರೆ. ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಮುಜಗರ ಆಗಬಹುದು. ಈ ಎಲ್ಲ ಕಾರಣಗಳಿಂದ ದಾವಣಗೆರೆ ಜಿಲ್ಲಾ ಉಸ್ತುವಾರಿಯನ್ನು ಬದಲಾಯಿಸಿ ಎಂದು ಪತ್ರದಲ್ಲಿ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.