ಮಡಿಕೇರಿ: ನೇರ ನಡೆ ನುಡಿಯ ಎಚ್. ವಿಶ್ವನಾಥ್ ಅವರ ಸೇರ್ಪಡೆಯಿಂದ ಜಾತ್ಯತೀತ ಜನತಾದಳ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಡಗು ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಜನನಾಯಕ ರಾಗಿರುವ ವಿಶ್ವನಾಥ್ ಹಿತೈಷಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಜೆಡಿಎಸ್ ಬಾಗಿಲು ಬಡಿಯು ತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಜೆಡಿಎಸ್ ಪ್ರಬಲ ರಾಜಕೀಯ ಪಕ್ಷವಾಗಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊಡಗು ಜೆಡಿಎಸ್‌ನಲ್ಲಿ ಹೊಸ ಹುಮ್ಮಸ್ಸು ಕಂಡು ಬಂದಿದ್ದು, ಜಿಲ್ಲೆಯ ಎರಡನೇ ಹಂತದ ಎಲ್ಲ ನಾಯಕರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಈ ಬಾರಿ ಕೊಡಗಿನ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಎಚ್. ವಿಶ್ವನಾಥ್ ಅವರ ಆಗಮನದಿಂದ ಜೆಡಿಎಸ್‌ನ ಕಾರ್ಯಕರ್ತರು ಹರ್ಷಗೊಂಡಿದ್ದು, ಮುಂದಾಳತ್ವದ ಬಗ್ಗೆ ನಿರೀಕ್ಷೆಯಲ್ಲಿದ್ದಾರೆ ಎಂದು ಪಿ.ಎಸ್. ಭರತ್ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಗ್ರಾಮ ಪಂಚಾಯತ್ ಸದಸ್ಯರು ಹೋಬಳಿ ನಾಯಕರ ಸಂಪರ್ಕ ದಲ್ಲಿದ್ದು, ಜೆಡಿಎಸ್ ಸೇರ್ಪಡೆಗೆ ಉತ್ಸುಕರಾಗಿದ್ದಾರೆ. ಹಲವಷ್ಟು ಕಾಂಗ್ರೆಸ್ ಮತ್ತು ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಳ ಜಗಳದಿಂದ ಬೇಸತ್ತು ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ. ರಾಜಕೀಯ ಲೆಕ್ಕಾಚಾರದ ಹಿನ್ನೆಲೆ ಪಕ್ಷ ಸೇರ್ಪಡೆಯ ಕುರಿತು ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ನ ದುರಾಡಳಿತ ಮತ್ತು ಬಿಜೆಪಿ ಮಂದಿಯ ಸ್ವಾರ್ಥ ರಾಜಕಾರಣ ದಿಂದ ಬೇಸತ್ತಿರುವ ಜನ ಪ್ರಾದೇಶಿಕ ಪಕ್ಷ ಜೆಡಿಎಸ್‌ನ ಅನಿವಾರ್ಯತೆಯನ್ನು ಅರಿತಿದ್ದಾರೆ. ಕರ್ನಾಟಕದ ಪಕ್ಷಕ್ಕೆ ಮಾತ್ರ ಕರ್ನಾಟಕದ ಹಿತ ಕಾಯಲು ಸಾಧ್ಯವೆಂದು ಮನಗಂಡಿರುವ ರಾಜ್ಯದ ಜನರು ಜೆಡಿಎಸ್ ಪರ ಒಲವು ತೋರುತ್ತಿದ್ದಾರೆ. ಈ ಬಗ್ಗೆ ಪಕ್ಷದ ಚಿಂತನಾ ಚಾವಡಿ ಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಯಾವುದೇ ಪಕ್ಷದಿಂದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಆಗಮಿಸಿದರೆ ಅವರನ್ನು ಸ್ವಾಗತಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.