Advertisement

ವಿಷ್ಣು ಸ್ಮಾರಕ ಬೆಂಗಳೂರಲ್ಲೇ ನಿರ್ಮಿಸಿ

12:56 PM Nov 29, 2018 | Team Udayavani |

ನೆಲಮಂಗಲ: ಸಾಹಸಸಿಂಹ ಡಾ.ವಿಷ್ಣು ವರ್ಧನ್‌ ಸ್ಮಾರಕವನ್ನು ಬೆಂಗಳೂರಿನಲ್ಲಿಯೇ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ವಿಷ್ಣು ವರ್ಧನ್‌ ಸೇವಾ ಸಮಿತಿ ಕಾರ್ಯಕರ್ತರು ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣ ಸೊಂಡೆಕೊಪ್ಪ ರಸ್ತೆಯಲ್ಲಿರುವ ಹೊನ್ನಗಂಗಯ್ಯನ ಪಾಳ್ಯದಲ್ಲಿರುವ ಡಾ. ವಿಷ್ಣುವರ್ಧನ್‌ ಮಂದಿರದ ಎದುರು ಡಾ.
ವಿಷ್ಣು ಸೇವಾ ಸಮಿತಿ ಪದಾಧಿಕಾರಿಗಳು ಮತ್ತು ವಿಷ್ಣು ಅಭಿಮಾನಿಗಳು ಬೃಹತ್‌ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರ ಕೂಡಲೆ ಸ್ಮಾರಕ ನಿರ್ಮಿಸಬೇಕೆಂದು ಒತ್ತಾಯಿಸಿದರು.

ಮೂವರೂ ದಿಗ್ಗಜರು ಒಂದೇ ಕಡೆ: ಈ ವೇಳೆ ಮಾತನಾಡಿದ ಡಾ.ವಿಷ್ಣು ಸೇವಾ ಸಮಿತಿ ರಾಜ್ಯಾಧ್ಯಕ್ಷ ವಿ.ಕುಮಾರ್‌, ಕಳೆದ 9 ವರ್ಷಗಳಿಂದ ವಿಷ್ಣು ಸ್ಮಾರಕ ನಿರ್ಮಾಣ ವಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದೇವೆ. ಆದರೆ, ವಿಷ್ಣು ಅಣ್ಣನಿಗೆ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರ ಮುಂದಾಗದೇ ಅಭಿಮಾನಿಗಳಿಗೆ ಮೋಸ ಮಾಡಿದೆ ಎಂದುಆಕ್ರೋಶ ವ್ಯಕ್ತಪಡಿಸಿದರು. 

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ
ಮಾತು ಕೇಳಿ ಬಹಳ ಸಂತೋಷವಾಗಿತ್ತು. ಆದರೆ, ನಟ ಅನಿರುದ್ಧ ಹೇಳಿಕೆ ಸರಿಯಲ್ಲ. ನಮಗೆ ವಿಷ್ಣು ಸ್ಮಾರಕ ಎಲ್ಲಾದರೂ ಪರವಾಗಿಲ್ಲ. ಪ್ರಥಮ ಆದ್ಯತೆಯಾಗಿ ಕಠೀರವ ಸ್ಟುಡಿಯೊದಲ್ಲೇ ಸ್ಮಾರಕ ನಿರ್ಮಾಣವಾದರೆ ಕನ್ನಡ ಚಲನ ಚಿತ್ರ ರಂಗದ ಮೂವರೂ ದಿಗ್ಗಜರನ್ನು ಒಂದೇ ಕಡೆ ನೋಡುವ ಭಾಗ್ಯ ನಮ್ಮದಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲೇ ವಿಷ್ಣು ಮಂದಿರ ನಿರ್ಮಿಸಿ: ಈ ವಿಚಾರದಲ್ಲಿ ನಟ ಅನಿರುದ್ಧ್ ವೈಯಕ್ತಿಕ ವಿಚಾರಗಳನ್ನು ಮುಂದೆ
ತರದೇ ಸಾಹಸಸಿಂಹ ವಿಷ್ಣುರ ಸ್ಮಾರಕ ನಿರ್ಮಾಣ ಮಾಡಬೇಕು. ಮುಖ್ಯ ಮಂತ್ರಿಗಳು ಯಾರ ಮಾತಿಗೂ ಗಮನ ಹರಿಸದೇ ಅಭಿಮಾನಿಗಳ ಆಸೆಯಂತೆ ಬೆಂಗಳೂರಿನಲ್ಲಿಯೇ ವಿಷ್ಣು ಮಂದಿರ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

Advertisement

ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ: ಸ್ಮಾರಕ ನಿರ್ಮಾಣ ಮಾಡದಿದ್ದರೆ ನೆಲಮಂಗಲ ದಿಂದ ಬೆಂಗಳೂರಿನವರೆಗೂ ಬೃಹತ್‌ ಮೆರೆವಣಿಗೆ ಮತ್ತು ರಾಜ್ಯಾದ್ಯಂತ ಪ್ರತಿ ಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ವಿಷ್ಣು ಅಭಿಮಾನಿ ಯಶ್ವಂತ್‌ ಮಾತನಾಡಿ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಅಭಿಮಾನಿಗಳಿಂದ ಪೂರ್ಣ ಸಹಕಾರವಿದೆ. ಬೆಂಗಳೂರಿನಲ್ಲಿಯೇ ಸ್ಮಾರಕ ನಿರ್ಮಾಣ ಮಾಡಿದರೆ ಅಭಿಮಾನಿಗಳು ಅವರ ನೆರಳಲ್ಲಿ ಕುಳಿತು ಅವರ ಆಶ್ರಯ ಪಡೆದಷ್ಟು ಸಂತೋಷ ಪಡುತ್ತೇವೆ. ಸಮಾಜಕ್ಕೆ ವಿಷ್ಣುವರ್ಧನ್‌ರ ಕೊಡುಗೆ ಅಪಾರವಾಗಿದೆ. ಸರ್ಕಾರ 9 ವರ್ಷಗಳಿಂದ ಸತಾಯಿಸುತ್ತಿರುವುದು ವಿಷ್ಣು ಮತ್ತು ಅಭಿಮಾನಿಗಳಿಗೆ ಮಾಡಿದ ಮೋಸ ಎಂದರು.

 ಈ ಸಂದರ್ಭದಲ್ಲಿ ಡಾ.ವಿಷ್ಣು ಸೇವಾ ಸಮಿತಿ ಸದಸ್ಯ ಯಶ್ವಂತ್‌, ಉಮೇಶ್‌, ಮಂಜುನಾಥ್‌, ಸುರೇಶ್‌, ಪ್ರಮೋದ್‌,
ನಾಗರಾಜು, ಸ್ನೇಕ್‌ರಾಜು, ಕೃಷ್ಣಮೂರ್ತಿ, ಧನುಷ್‌, ಲಕ್ಷ್ಮೀಕಾಂತ್‌ ಹಾಗೂ ನೂರಾರು ವಿಷ್ಣು ಅಭಿಮಾನಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next