ಮೈಸೂರು: ದಿ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಸರ್ಕಾರ ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ಗುರುತಿಸಿರುವ ಜಾಗದಲ್ಲಿ ಸೋಮವಾರ ಪೂಜೆ ಸಲ್ಲಿಸಲು ತೆರಳಿದ್ದ ವಿಷ್ಣು ಸೇನಾ ಸಮಿತಿಯ ಪದಾಧಿಕಾರಿಗಳನ್ನು ರೈತ
ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾಳೆ. ಪ್ರಕರಣ ಇನ್ನೂ ನ್ಯಾಯಾಲಯದಲ್ಲಿರು ವುದರಿಂದ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಈ ನಡುವೆ ವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಇಲ್ಲಿಗೆ ತೆರಳಿ ವಿಷ್ಣುವರ್ಧನ್ ಭಾವಚಿತ್ರವುಳ್ಳ ಬ್ಯಾನರ್ ಕಟ್ಟಿ ಪೂಜೆ ಸಲ್ಲಿಸಿ, ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲು ಮುಂದಾದಾಗ ಜಮೀನಿನಲ್ಲಿದ್ದ ರೈತ ಮಹಿಳೆ ಜಯಮ್ಮ ಇವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಷ್ಣುವರ್ಧನ್‌ಗೆ ಸ್ಮಾರಕ ನಿರ್ಮಿಸಲು ತಮ್ಮ ತಕರಾರಿಲ್ಲ. ಆದರೆ, ತಮ್ಮ ಜೀವನಕ್ಕೆ ಈ ಜಮೀನೇ ಆಧಾರ. ಬದುಕಿಗೆ ದಾರಿ ಮಾಡಿಕೊಟ್ಟು, ಇಲ್ಲಿ ಏನಾದರೂ ಮಾಡಿಕೊಳ್ಳಿ ಎಂದು ಆಗ್ರಹಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಸಮಿತಿಯ ಪದಾಧಿಕಾರಿಗಳು, ಸರ್ಕಾರ ರೈತರಿಗೆ ತೊಂದರೆ ಕೊಡುವುದಿಲ್ಲ. ತಮಗೆ ದೊರಕಬೇಕಾದ ಪರಿಹಾರ ಇಲ್ಲವೇ ಬದಲಿ ಜಾಗವನ್ನು ಸರ್ಕಾರ ನೀಡಲಿದೆ. ಸರ್ಕಾರ ನಿಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗದಿದ್ದಲ್ಲಿ ವಿಷ್ಣು ಅಭಿಮಾನಿಗಳೇ ದೇಣಿಗೆ ಸಂಗ್ರಹಿಸಿ, ಆ ಹಣದಲ್ಲಿ ಜಾಗ ಖರೀದಿಸಿ ಸ್ಮಾರಕ ನಿರ್ಮಿಸುವುದಾಗಿ ತಿಳಿಸಿದರು.
ಎಚ್.ಡಿ.ಕೋಟೆ ರಸ್ತೆಯಲ್ಲಿರುವ ಮೈಸೂರು ತಾಲೂಕು ಹಾಲಾಳು ಗ್ರಾಮದ ಸರ್ವೇ ನಂಬರ್ 8ರಲ್ಲಿನ 5 ಎಕರೆ ಜಾಗವನ್ನು ರಾಜ್ಯ ಸರ್ಕಾರ, ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಗುರುತಿಸಿತ್ತು. ಆದರೆ, ಆ ಜಾಗದಲ್ಲಿ ಸಾಗುವಳಿ ಮಾಡುತ್ತಿದ್ದ ರೈತರು, ತಮಗೆ ಜೀವನಾಧಾರಕ್ಕೆ ಇರುವ ತುಂಡುಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ಒಂದು ವೇಳೆ, ಈ ಜಾಗವನ್ನು ಬಿಟ್ಟು ಕೊಡಲೇ ಬೇಕು ಎಂದಾದಲ್ಲಿ ಜಿಲ್ಲಾಡಳಿತ ತಮಗೆ ಬದಲಿ ವ್ಯವಸ್ಥೆ ಮಾಡಿಕೊಡಲಿ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಆದರೆ, ಜಿಲ್ಲಾಡಳಿತ ರೈತರ ವಾದವನ್ನು ತಳ್ಳಿ ಹಾಕಿ ಸ್ಮಾರಕ ನಿರ್ಮಾಣಕ್ಕೆ ಗುರುತಿಸಲಾಗಿರುವ ಜಮೀನು ಗೋಮಾಳ ಆಗಿರುವುದರಿಂದ ರೈತರಿಗೆ ಈ ಜಮೀನಿನ ಮೇಲೆ ಯಾವುದೇ ಅಧಿಕಾರವಿಲ್ಲ ಎಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿತ್ತು. ಅದರಂತೆ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ದಿನಾಂಕ ನಿಗದಿಯಾಗಿತ್ತು. ಆದರೆ, ಅಂದು ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಶೋಕಾಚರಣೆ ಘೋಷಣೆಯಾದ್ದರಿಂದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ, ಕಾರ್ಯಕ್ರಮದ ಸಿದ್ಧತೆ ಆಗಿದ್ದರಿಂದ ವಿಷ್ಣುವರ್ಧನ್ ಪತ್ನಿ ಭಾರತಿಯವರೇ ಭೂಮಿ
ಪೂಜೆ ನೆರವೇರಿಸಿದ್ದರು.