ಲಾಹೋರ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಪರವಾಗಿ 102 ಟೆಸ್ಟ್, 262 ಏಕದಿನ ಪಂದ್ಯಗಳು ಮತ್ತು 108 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಒಂದು ದೇಶ ಹೊರತುಪಡಿಸಿ ಉಳಿದೆಲ್ಲಾ ಟೆಸ್ಟ್ ಆಡುವ ದೇಶಗಳಲ್ಲಿ ವಿರಾಟ್ ಕ್ರಿಕೆಟ್ ಪಂದ್ಯವಾಡಿದ್ದಾರೆ. ಆ ದೇಶವೇ ಪಾಕಿಸ್ತಾನ. ಭಾರತ ಕ್ರಿಕೆಟ್ ತಂಡ 2006 ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಆ ವೇಳೆ ಕೊಹ್ಲಿ ಭಾರತ ತಂಡಕ್ಕೆ ಪದಾರ್ಪಣೆಯೇ ಮಾಡಿರಲಿಲ್ಲ.
ಎರಡು ನೆರೆಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿಯೂ ನಡೆಯುವುದಿಲ್ಲ. ಕೇವಲ ವಿಶ್ವ ಟೂರ್ನಿಗಳಲ್ಲಿ ಮಾತ್ರ ಎರಡು ತಂಡಗಳು ಮುಖಾಮುಖಿಯಾಗುತ್ತವೆ. ಇದೇ ವೇಳೆ ಹಲವು ಅಭಿಮಾನಿಗಳು ವಿರಾಟ್ ಕೊಹ್ಲಿ ಪಾಕಿಸ್ಥಾನದಲ್ಲಿ ಆಡಬೇಕು ಎಂದು ಬಯಸುತ್ತಾರೆ.
ಸೆಪ್ಟೆಂಬರ್ 30 ರಂದು ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಟಿ20 ಪಂದ್ಯದ ವೇಳೆ, ಸ್ಥಳೀಯ ಅಭಿಮಾನಿಯೊಬ್ಬ ಪೋಸ್ಟರ್ ನಲ್ಲಿ ವಿರಾಟ್ ಗಾಗಿ ವಿಶೇಷ ಸಂದೇಶದೊಂದಿಗೆ ಕ್ಯಾಮೆರಾಗೆ ಪೋಸ್ ನೀಡಿದ್ದು, ಅದೀಗ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ:ಹಣಕಾಸು ವಹಿವಾಟು ಪ್ರಕರಣ ವರ್ಗಾವಣೆ ಪ್ರಶ್ನಿಸಿದ್ದ ಜೈನ್ ಮನವಿ ವಜಾಗೊಳಿಸಿದ ಹೈಕೋರ್ಟ್
‘ವಿರಾಟ್ ನೀವು ನಿವೃತ್ತಿಯಾಗುವ ಮೊದಲೊಮ್ಮೆ ಪಾಕಿಸ್ಥಾನದಲ್ಲಿ ಆಡಿ’ ಎಂಬ ಬರಹವಿದ್ದ ಪೋಸ್ಟರ್ ಇದೀಗ ವೈರಲ್ ಆಗುತ್ತಿದೆ.
ಮುಂದಿನ ಟಿ20 ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗುತ್ತಿದೆ. ಅ.23ರಂದು ಮೆಲ್ಬೋರ್ನ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಮತ್ತು ಬಾಬರ್ ಅಜಂ ತಂಡಗಳು ಸೆಣಸಾಡಲಿದೆ.