Advertisement

ಸ್ಟೀವನ್‌ ಸ್ಮಿತ್‌ ಆರನೇ ಶ್ರೇಷ್ಠ ರೇಟಿಂಗ್‌ ಅಂಕ

03:55 PM Feb 27, 2017 | Karthik A |

ದುಬೈ: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ರವಿವಾರ ಪ್ರಕಟಗೊಂಡ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ತನ್ನ ಹಿಂದಿನ ದ್ವಿತೀಯ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಗರಿಷ್ಠ ಸ್ಥಾನದಲ್ಲಿರುವ ಆಟಗಾರ ಆಗಿದ್ದಾರೆ. ಇದೇ ವೇಳೆ ಆಫ್ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿ‌ನ್‌ ಬೌಲರ್ ಮತ್ತು ಆಲ್‌ರೌಂಡರ್ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಪುಣೆಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ಹೀನಾಯ ಸೋಲನ್ನು ಕಂಡರೂ ಐಸಿಸಿ ರ್‍ಯಾಂಕಿಂಗ್‌ನಲ್ಲಿ ಯಾವುದೇ ತೊಂದರೆಯಾಗಿಲ್ಲ. ಈ ಪಂದ್ಯದಲ್ಲಿ 64 ಮತ್ತು 10 ರನ್‌ ಗಳಿಸಿದ ಆರಂಭಿಕ ಕೆಎಲ್‌ ರಾಹುಲ್‌ ತನ್ನ ಜೀವನಶ್ರೇಷ್ಠ 46ನೇ ಸ್ಥಾನ ಪಡೆದಿದ್ದಾರೆ.

Advertisement

ಸ್ಟೀವ್‌ ಓ’ಕೀಫ್ 
ಪುಣೆ ಗೆಲುವಿನ ರೂವಾರಿ ಸ್ಟೀವ್‌ ಓ’ಕೀಫ್ ಮತ್ತು ಸ್ಟೀವನ್‌ ಸ್ಮಿತ್‌ ರ್‍ಯಾಂಕಿಂಗ್‌ನಲ್ಲಿ ಬಹಳಷ್ಟು ಉತ್ತಮ ಸ್ಥಾನ ಏರಿದ್ದಾರೆ. 70 ರನ್ನಿಗೆ 12 ವಿಕೆಟ್‌ ಕಿತ್ತ ಓ’ಕೀಫ್ 33 ಸ್ಥಾನ ಮೇಲಕ್ಕೇರಿ ತನ್ನ ಜೀವನಶ್ರೇಷ್ಠ 29ನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಂದ್ಯವೊಂದರಲ್ಲಿ 70 ರನ್ನಿಗೆ 12 ವಿಕೆಟ್‌ ಕಿತ್ತ ಸಾಧನೆ ಮಾಡಿರುವುದು ಓ’ಕೀಫ್ ಮಾತ್ರ. ಈ ಮೊದಲು 1896ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಾರ್ಜ್‌ ಲೋಹ್ಮನ್‌ ಅವರು 71 ರನ್ನಿಗೆ 12 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು.

ಪುಣೆ ಟೆಸ್ಟ್‌ನಲ್ಲಿ 7 ವಿಕೆಟ್‌ ಕಿತ್ತ ಅಶ್ವಿ‌ನ್‌ 878 ಅಂಕಗಳೊಂದಿಗೆ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ಆದರೆ ರವೀಂದ್ರ ಜಡೇಜ ಇದೀಗ ಆಸ್ಟ್ರೇಲಿಯದ ಜೋಶ್‌ ಹ್ಯಾಝಲ್‌ವುಡ್‌ ಜತೆ ದ್ವಿತೀಯ ಸ್ಥಾನ ಹಂಚಿಕೊಳ್ಳಬೇಕಾಗಿದೆ. ಪುಣೆ ಟೆಸ್ಟ್‌ನಲ್ಲಿ ಆರು ವಿಕೆಟ್‌ ಕಿತ್ತ ಉಮೇಶ್‌ ಯಾದವ್‌ ನಾಲ್ಕು ಸ್ಥಾನ ಮೇಲಕ್ಕೇರಿ 39ನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯದ ಸ್ಟಾರ್ಕ್‌ ಆಲ್‌ರೌಂಡರ್ ಪಟ್ಟಿಯಲ್ಲಿ ಮೂರು ಸ್ಥಾನ ಮೇಲಕ್ಕೇರಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಅವರು 61 ಮತ್ತು 30 ರನ್‌ ಗಳಿಸಿ ತಂಡದ ಗೆಲುವಿಗೆ ಗಣನೀಯ ಕೊಡುಗೆ ಸಲ್ಲಿಸಿದ್ದರು. ಅಶ್ವಿ‌ನ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಗ್ರಸ್ಥಾನದಲ್ಲಿ ಸ್ಟೀವನ್‌ ಸ್ಮಿತ್‌
ಪುಣೆ ಟೆಸ್ಟ್‌ನಲ್ಲಿ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿ ಶತಕ ದಾಖಲಿಸಿದ್ದ ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಪಟ್ಟಿಯಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿದ್ದಾರೆ. 939 ರೇಟಿಂಗ್‌ ಅಂಕ ಗಳಿಸುವ ಮೂಲಕ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇದು ಅವರ ಜೀವನಶ್ರೇಷ್ಠ ರೇಟಿಂಗ್‌ ಅಂಕವಾಗಿದೆ. ಸ್ಮಿತ್‌ ಶತಕದಿಂದಾಗಿ ಆಸ್ಟ್ರೇಲಿಯ 333 ರನ್ನುಗಳ ಬೃಹತ್‌ ಗೆಲುವು ದಾಖಲಿಸಿತ್ತು ಮತ್ತು ನಾಲ್ಕು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಂತಾಯಿತು. ಪುಣೆ ಟೆಸ್ಟ್‌ನಲ್ಲಿ 27 ಮತ್ತು 109 ರನ್‌ ಗಳಿಸಿದ್ದ ಸ್ಮಿತ್‌ ಅವರು ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ಅವರಿಗಿಂತ 66 ಅಂಕ ಮುನ್ನಡೆಯಲ್ಲಿದ್ದಾರೆ. ಇಂಗ್ಲೆಂಡಿನ ಜೋ ರೂಟ್‌ 848 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಸ್ಮಿತ್‌ ಅವರ ರೇಟಿಂಗ್‌ ಅಂಕವು (939 ಅಂಕ) ಆರನೇ ಶ್ರೇಷ್ಠ ಅಂಕವಾಗಿದೆ. ಡಾನ್‌ ಬ್ರಾಡ್‌ಮನ್‌ (961), ಲೆನ್‌ ಹಟನ್‌ (945), ಜ್ಯಾಕ್‌ ಹೊಬ್ಸ್ ಮತ್ತು ರಿಕಿ ಪಾಂಟಿಂಗ್‌ (ಇಬ್ಬರೂ 942) ಹಾಗೂ ಪೀಟರ್‌ ಮೇ (941) ಅವರು ಸ್ಮಿತ್‌ ಅವರಿಗಿಂತ ಉನ್ನತ ರೇಟಿಂಗ್‌ ಅಂಕ ಹೊಂದಿದ್ದರು. ಗ್ಯಾರಿ ಸೋಬರ್, ವಿವಿಯನ್‌ ರಿಚರ್ಡ್ಸ್‌ ಮತ್ತು ಕುಮಾರ ಸಂಗಕ್ಕರ ತಮ್ಮ ಜೀವನಶ್ರೇಷ್ಠ 938 ರೇಟಿಂಗ್‌ ಅಂಕ ಹೊಂದಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next