ಹೊಸದಿಲ್ಲಿ: ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಅವರಿಗೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.
ವಿಶ್ರಾಂತಿಯಿಂದ ಕೊಹ್ಲಿ ಅವರು ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಪೂರ್ಣ ಪ್ರಮಾಣದಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಐಪಿಎಲ್ ಕೂಟದ ವೇಳೆ ಎರಡು ತಿಂಗಳು ಬಯೊ-ಬಬಲ್‌ನಲ್ಲಿ ಸಮಯ ಕಳೆದ ಕೊಹ್ಲಿ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಅವರು ಮತ್ತೆ ಶ್ರೇಷ್ಠ ಫಾರ್ಮ್ಗೆ ಮರಳುವುದು ಅಗತ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಶತಕ ಸಿಡಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗುವ ಸಾಧ್ಯತೆಯಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಸರಣಿ ಜೂನ್ 9ರಿಂದ 19ರ ವರೆಗೆ ನಡೆಯಲಿದೆ. ದಿಲ್ಲಿ, ಕಟಕ್, ವಿಶಾಖಪಟ್ಟಣ, ರಾಜ್‌ಕೋಟ್ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಆಬಳಿಕ ಜೂನ್-ಜುಲೈಯಲ್ಲಿ ಭಾರತ ತಂಡ ಇಂಗ್ಲೆಂಡಿಗೆ ಪ್ರಯಾಣಿಸಲಿದೆ.
ಮೊದಲು ಅಯರ್‌ಲ್ಯಾಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಐಪಿಎಲ್ ಮುಗಿಯುವ ಹೊತ್ತಿನಲ್ಲಿ ಆಯ್ಕೆ ಸಮಿತಿ ಸದಸ್ಯರು ಸಭೆ ಸೇರಿ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಮುಂಬರುವ ಟಿ20 ವಿಶ್ವಕಪ್‌ಗೆ ಭಾರತೀಯ ತಂಡದ ಸಿದ್ಧತೆಯ ದೃಷ್ಟಿ ಇಟ್ಟುಕೊಂಡು ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ.