ಅಡಿಲೇಡ್ :ಭಾರತದ ಸ್ಟಾರ್ ಬ್ಯಾಟ್ಸ್ ಮ್ಯಾನ್ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲನ್ನು ತಲುಪಿದ್ದು, ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಅಡಿಲೇಡ್‌ನಲ್ಲಿ ನಡೆದ ಭಾರತದ ಗ್ರೂಪ್ 2 ಮುಖಾಮುಖಿಯಲ್ಲಿ ಬಾಂಗ್ಲಾದೇಶ ವಿರುದ್ಧ ವೈಯಕ್ತಿಕ ಸ್ಕೋರ್ 16 ತಲುಪಿದಾಗ ಕೊಹ್ಲಿ ಇನ್ನೊಂದು ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬುಧವಾರ ಬಾಂಗ್ಲಾದೇಶ ವಿರುದ್ಧ ಕೊಹ್ಲಿ 64(44 ಎಸೆತ) ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರ ಅತಿ ಹೆಚ್ಚು ರನ್‌ಗಳ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಮಹೇಲಾ 31 ಇನ್ನಿಂಗ್ಸ್‌ಗಳಲ್ಲಿ 1016 ರನ್ ಗಳಿಸಿದ್ದರು. ಕೊಹ್ಲಿ ತಮ್ಮ 23ನೇ ಇನ್ನಿಂಗ್ಸ್‌ನಲ್ಲಿ 1017 ರನ್‌ಗಳ ಗಡಿ ದಾಟಿದರು.
ಕೊಹ್ಲಿ 2014 ರಲ್ಲಿ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದರು, ಅವರ 319 ರನ್ ಗಳು ಭಾರತವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.ಫೈನಲ್ ನಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿತ್ತು. 2016ರ ಆವೃತ್ತಿಯ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಹಂತದಲ್ಲಿ ನಿರ್ಗಮಿಸಿದ ಬಳಿಕ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದರು.
ಪಾಕಿಸ್ಥಾನದ ವಿರುದ್ಧ ಅತ್ಯಮೋಘ ಅಜೇಯ 82ರನ್, ನೆದರ್ಲ್ಯಾಂಡ್ಸ್ ವಿರುದ್ಧ 62 ರನ್ ಗಳಿಸಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.