Advertisement

ಹೆಚ್ಚುತ್ತಿದೆ ವೈರಲ್‌ ಜ್ವರ; ಆರೋಗ್ಯ ಇಲಾಖೆಯಿಂದ ಫೀವರ್‌ ಸರ್ವೇ

12:41 PM Oct 14, 2022 | Team Udayavani |

ಮಹಾನಗರ: ಹವಾಮಾನ ಬದಲಾವಣೆಯಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್‌ ಜ್ವರ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಫೀವರ್‌ ಸರ್ವೇ ನಡೆಯುತ್ತಿದೆ.

Advertisement

ಕೆಲವು ದಿನಗಳಿಂದ ಬೆಳಗ್ಗೆ, ರಾತ್ರಿ ವೇಳೆ ನಗರದಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಮೋಡ-ಬಿಸಿಲಿನ ಜತೆ ಸೆಕೆಯ ಬೇಗೆಯೂ ಹೆಚ್ಚುತ್ತಿದೆ. ಈ ನಡುವೆ ಪ್ರತಿಕೂಲ ಹವಾಮಾನದ ಪರಿಣಾಮ ನಗರದಲ್ಲಿ ವೈರಲ್‌ ಫೀವರ್‌ ಏರಿಕೆಯತ್ತ ಸಾಗುತ್ತಿದೆ. ಕೆಲವು ದಿನಗಳಿಗೆ ಹೋಲಿಸಿದರೆ ಕೆಮ್ಮು, ಜ್ವರ, ಗಂಟಲು, ತಲೆ ನೋವು ಮುಂತಾದ ಲಕ್ಷಣದಿಂದ ವೈದ್ಯರ ಬಳಿ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಈ ನಿಟ್ಟಿನಲ್ಲಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ತಂಡ ಕಟ್ಟಿ ಫೀವರ್‌ ಸರ್ವೇ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮಂಗಳೂರು ಪಾಲಿಕೆ ವ್ಯಾಪ್ತಿಯ 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಹಿತ, ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೇ ನಡೆಸಲಾಗುತ್ತಿದೆ.

ಆಶಾ ಕಾರ್ಯ ಕರ್ತೆಯರು, ಮಲೇರಿಯಾ ನಿಯಂತ್ರಣ ಕಾರ್ಯಕರ್ತರು, ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಪಾಲಿಕೆ ವ್ಯಾಪ್ತಿಯಲ್ಲಿ ಎಂಪಿಡಬ್ಲ್ಯು ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಜ್ವರದ ಲಕ್ಷಣ ಇದ್ದರೆ ಅವರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ಮುನ್ನೆಚ್ಚ ರಿಕೆ ಕೈಗೊಳ್ಳುವಂತೆ ಮನೆ ಮಂದಿಗೆ ಮಾಹಿತಿ ನೀಡುತ್ತಿದ್ದಾರೆ. ಅದೇ ರೀತಿ ಲಾರ್ವಸೊಳ್ಳೆ ಉತ್ಪತ್ತಿ ನಾಶದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಇಲಿ ಜ್ವರ, ಎಚ್‌1 ಎನ್‌1 ಪ್ರಕರಣ

Advertisement

ದ.ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ, ವೈರಲ್‌ ಜ್ವರದ ನಡುವೆಯೇ ಇಲಿ ಜ್ವರ ಮತ್ತು ಎಚ್‌1 ಎನ್‌1 ಪ್ರಕರಣದ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರಕಾರ ಜನವರಿ ತಿಂಗಳಿನಿಂದ ಈವರಗೆ ದ.ಕ. ಜಿಲ್ಲೆಯಲ್ಲಿ 439 ಮಂದಿಗೆ ಇಲಿ ಜ್ವರ ಮತ್ತು 57 ಮಂದಿಗೆ ಎಚ್‌1 ಎನ್‌1 ರೋಗ ಕಾಣಿಸಿಕೊಳ್ಳುತ್ತಿದೆ ಎನ್ನುತ್ತಾರೆ.

ದಾಖಲೆಯ ಡೆಂಗ್ಯೂ ಪ್ರಕರಣ

ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಏರಿಕೆಯಾಗುತ್ತಿದ್ದು, ಮೂರು ವರ್ಷಗಳಲ್ಲಿ ಅತೀ ಹೆಚ್ಚಿನ ಡೆಂಗ್ಯೂ ಪ್ರಕರಣ ಈ ವರ್ಷ ದಾಖಲಾಗಿದೆ. 2020ರಲ್ಲಿ 230 ಮಂದಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿದ್ದರು. 2021ರಲ್ಲಿ 295 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಇದೀಗ 2022ರಲ್ಲಿ ಸದ್ಯ 306 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಇದರಲ್ಲಿ 135 ಮಂದಿ ಮಂಗಳೂರು ಪಾಲಿಕೆ ವ್ಯಾಪ್ತಿಯದ್ದಾಗಿದೆ.

ಮನೆ ಮನೆ ಭೇಟಿ: ಹವಾಮಾನ ಬದಲಾವಣೆಯ ಪರಿಣಾಮ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೈರಲ್‌ ಫೀವರ್‌ ಏರಿಕೆಯಾಗುತ್ತಿದೆ. ಈ ನಡುವೆ ಡೆಂಗ್ಯೂ ಪ್ರಕರಣವೂ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಗೆ ಹೋಲಿಸಿದರೆ ಶೇ.30ರಷ್ಟು ಮಂಗಳೂರು ಪಾಲಿಕೆ ವ್ಯಾಪ್ತಿಯದ್ದಾಗಿದೆ. ಆರೋಗ್ಯ ಇಲಾಖೆಯಿಂದ ದ.ಕ. ಜಿಲ್ಲೆಯಲ್ಲಿ ಫೀವರ್‌ ಸರ್ವೇ ನಡೆಸಲಾಗುತ್ತಿದೆ. ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ, ಜ್ವರದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಜ್ವರ ಲಕ್ಷಣ ಇರುವವರಿಗೆ ಪರೀಕ್ಷೆ ನಡೆಸಲು ಸೂಚಿಸುತ್ತಿದ್ದಾರೆ. -ಡಾ| ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

„ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next