ಬೀಜಿಂಗ್/ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಜನಜೀವನ ಹದಗೆಟ್ಟ ಬೆನ್ನಲ್ಲೇ ಜನರು ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿದಿದ್ದರೆ, ಮತ್ತೊಂದೆಡೆ ಚೀನಾದ ಶಾಂಘೈ ನಗರದಲ್ಲಿ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಜನರು ಆಹಾರವಿಲ್ಲದೇ ಹಸಿವಿನಿಂದ ಕಂಗೆಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸದಾರಮೆ ನಾಟಕ ‘ಲಕ್ಕಿಡಿಪ್ ಸಿಎಂ’ ಕುಮಾರಸ್ವಾಮಿಗೆ ಹೊಸತಲ್ಲ: ಬಿಜೆಪಿ ವ್ಯಂಗ್ಯ
ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿರುವ ಎಲ್ಲಾ 2.5 ಕೋಟಿ ಜನರು ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಕೋವಿಡ್ 19 ಸೋಂಕು ಪರೀಕ್ಷಿಸಲು ಮಾತ್ರ ಮನೆಯಿಂದ ಹೊರಗೆ ಬರಲು ಅವಕಾಶ ನೀಡಲಾಗಿದೆ.
ಕಠಿಣ ನಿಯಮ ಜಾರಿಯಿಂದಾಗಿ ಕೋಟ್ಯಂತರ ಜನರು ಮನೆಯಲ್ಲೇ ಬಂಧಿಯಾಗಿದ್ದು, ಇದರ ಪರಿಣಾಮ ಆಹಾರ ಸರಬರಾಜು ಮಾಡುವವರ ಕೊರತೆ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಜನರು ಆಹಾರವಿಲ್ಲದೇ ಕಂಗೆಡುವಂತಾಗಿದೆ ಎಂದು ವರದಿ ತಿಳಿಸಿದೆ.
ಆನ್ ಲೈನ್ ನಲ್ಲಿ ಆಹಾರ ಖರೀದಿಸಿದರೂ ಕೂಡಾ ತುಂಬಾ ತೊಂದರೆ ಎದುರಿಸುವಂತಾಗಿದೆ. ಯಾಕೆಂದರೆ ಆಹಾರವನ್ನು ಮನೆ ಬಾಗಿಲಿಗೆ ತಂದು ಕೊಡುವ ಡೆಲಿವರಿ ಬಾಯ್ ಗಳ ಕೊರತೆ ಇದೆ ಎಂದು ಪುಕ್ಸಿ ನಿವಾಸಿ ಸನ್ ಜಿಯಾನ್ (29) ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಬಲವಂತವಾಗಿ ಲಾಕ್ ಡೌನ್ ಹೇರಿದ್ದಲ್ಲದೇ, ಜನರನ್ನು ಬಲವಂತಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತಿದೆ. ಇದರಿಂದಾಗಿ ಜನರು ತುಂಬಾ ಆತಂಕಕ್ಕೊಳಗಾಗುವಂತಾಗಿದೆ. ಸೋಂಕು ಇಲ್ಲದಿದ್ದರೂ ಬಲವಂತವಾಗಿ ಐಸೋಲೇಶನ್ ಗೆ ಕಳುಹಿಸುತ್ತಿರುವುದಾಗಿ ಜಿಯಾನ್ ಆರೋಪಿಸಿದ್ದಾರೆ.
ಮಾರ್ಚ್ ನಿಂದ ಚೀನಾದಲ್ಲಿ ಅಂದಾಜು 1,04,000 ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ. ಇದರಲ್ಲಿ ಶೇ.90ರಷ್ಟು ಚೀನಾದ ಶಾಂಘೈ ಅಥವಾ ಈಶಾನ್ಯ ಜಿಲಿನ್ ಪ್ರಾಂತ್ಯದಲ್ಲಿ ಪತ್ತೆಯಾಗಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.