ಔರಂಗಾಬಾದ್ : ರಾಮ ನವಮಿ ಸಂದರ್ಭದಲ್ಲಿ ಇಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ, ಕಾಳಗ ಉಂಟಾದುದನ್ನು ಅನುಸರಿಸಿ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಸೆ.144 ಹೇರಿದ್ದಾರೆ.
ನಿನ್ನೆ ಭಾನುವಾರ ನವಾದೀಹ್ ಪ್ರದೇಶದಲ್ಲಿ ರಾಮ ನವಮಿಯ ಮೆರವಣಿಗೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಕಲ್ಲೆಸೆಯತೊಡಗುವುದರೊಂದಿಗೆ ಎರಡು ಸಮುದಾಯಗಳ ನಡುವೆ ಘರ್ಷಣೆ ಸ್ಫೋಟಗೊಂಡಿತ್ತು. ಕಲ್ಲೆಸೆತ ಮತ್ತು ಅನಂತರದ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಘರ್ಷಣೆ ಸ್ಫೋಟಗೊಂಡದ್ದನ್ನು ಅನುಸರಿಸಿ ರಮೇಶ್ ಚೌಕದಲ್ಲಿ ಉದ್ರಿಕ್ತ ಗುಂಪು ಅಂಗಡಿಗಳನ್ನು ಸುಟ್ಟು ಹಾಕಿ ಸೊತ್ತುಗಳನ್ನು ನಾಶಪಡಿಸಿತು.
ಔರಂಗಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟರು ತಿಳಿಸಿರುವ ಪ್ರಕಾರ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಮ ನವಮಿ ಪ್ರಯುಕ್ತದ ಮೆರವಣಿಗೆಗೆ ಅಧಿಕೃತ ಅನುಮತಿ ನೀಡಲಾಗಿತ್ತು. ಅಂತೆಯೇ ಆ ಮೆರವಣಿಗೆ ಪೂರ್ವ ನಿರ್ಧರಿತ ಮಾರ್ಗದ ಮೂಲಕ ಸಾಗುತ್ತಿತ್ತು.
ಪಟ್ನಾ ವಲಯ ಐಜಿ ನಯ್ಯರ್ ಹಸನೈನ್ ಖಾನ್ ತಿಳಿಸಿರುವ ಪ್ರಕಾರ ಜಿಲ್ಲಾ ಸಶಸ್ತ್ರ ಪಡೆಯನ್ನು ಸಾಮರಸ್ಯ ಬಾಧಿತ, ಹಿಂಸೆ ಸ್ಫೋಟಗೊಂಡ ಪ್ರದೇಶಗಳಲ್ಲಿ, ನಿಯೋಜಿಸಲಾಗಿದೆ.
ಇದೇ ವೇಳೆ ಬಿಹಾರದ ಇತರ ಭಾಗಗಳಾದ ಗಯಾ ಮತ್ತು ಸಿವನ್ ನಲ್ಲೂ ಕಲ್ಲೆಸೆತ ಮತ್ತು ಹಿಂಸೆ ಸ್ಫೋಟಗೊಂಡ ವರದಿಗಳು ಬಂದಿವೆ.