Advertisement

ಬಜಪೆಯಲ್ಲಿದೆ ಅಮೆರಿಕ-ಬ್ರಿಟನ್‌ನ ಹಳೆ ಜಮಾನದ ಕಾರು!

04:28 PM Dec 12, 2020 | sudhir |

ಮಹಾನಗರ: ಹೊಸ ಮಾಡೆಲ್‌ ಕಾರು ಖರೀದಿಗೆ ಜನರು ಮನಸ್ಸು ಮಾಡುವುದು ಸಾಮಾನ್ಯ. ಆದರೆ ಹಳೆ ಜಮಾನದ ವಿಂಟೇಜ್‌ ಕಾರು ಖರೀದಿಸಿ ಅದಕ್ಕೆ ಹೊಸತನವನ್ನು ನೀಡುವವರು ಬಲು ಅಪರೂಪ. ಅಮೆರಿಕ, ಬ್ರಿಟನ್‌ ಮಾಡೆಲ್‌ನ ಹಳೆ ಕಾರಿನ
ಸರದಾರರೊಬ್ಬರು ಮಂಗಳೂರು ಹೊರ ವಲಯದ ಬಜಪೆಯಲ್ಲಿದ್ದಾರೆ!

Advertisement

ಬಜಪೆ ನಿವಾಸಿ ಗುರುಪುರ ದೋಣಿಂಜಗುತ್ತು ಡಿ. ರತ್ನಾಕರ ಭಂಡಾರಿ ಅವರು ಹಲವು ವರ್ಷಗಳಿಂದ ಈ ಅಪರೂಪದ ಹವ್ಯಾಸ ಬೆಳೆಸಿಕೊಂಡಿದ್ದಾರೆ. 15 ವರ್ಷಗಳಿಂದ 8 ಜೀಪು ಸಹಿತ 18 ಹಳೆಯ ಕಾರು ಖರೀದಿಸಿದ್ದ ಅವರು, ಸದ್ಯ ಮೋರಿಸ್‌ ಮೈನರ್‌, ಆಸ್ಟಿನ್‌, ಹೆರಾಲ್ಡ್‌ ಎಂಬ ಮೂರು ಕಾರು, ವಿಲ್ಲೀಸ್‌ ಜೀಪು ಹೊಂದಿದ್ದಾರೆ.

1960ರ ಮಾಡೆಲ್‌ನ ಅಮೆರಿಕದ ವಿಲೀಸ್‌ ಜೀಪನ್ನು 14 ವರ್ಷದ ಹಿಂದೆ ಹೊಸದಿಲ್ಲಿಯಿಂದ ರತ್ನಾಕರ್‌ ಅವರು ತಂದಿದ್ದರು. ಅಂದು ಸುಮಾರು 20 ಸಾವಿರ ರೂ. ಪಾವತಿಸಿ ತಂದಿರುವ ಈ ಜೀಪನ್ನು ಅನಂತರ ಮಂಗಳೂರಲ್ಲಿ 7 ಲಕ್ಷ ರೂ.ವರೆಗೆ ಖರ್ಚು ಮಾಡಿ ನವೀಕರಿಸಲಾಗಿದೆ. 1937ರ ಮಾಡೆಲ್‌ನ ಬ್ರಿಟನ್‌ನ ಆಸ್ಟಿನ್‌ 7 ರೂಬಿ ಕಾರು ಗುಜರಾತ್‌ನ ಜಡೇಜ ಕುಟುಂಬದವರಲ್ಲಿ ಇದೆ ಎಂಬ ವಿಷಯ ಗೊತ್ತಾಗಿ 8 ಲಕ್ಷ ರೂ. ನೀಡಿ ಅಲ್ಲಿಂದ ತರಲಾಗಿತ್ತು. ನಾದುರಸ್ತಿಯಲ್ಲಿದ್ದ ಈ ಕಾರನ್ನು ರತ್ನಾಕರ್‌ ಅವರು ತಮ್ಮ ಜೀಪಿನ ಸಹಾಯದಿಂದ ಮಂಗಳೂರಿಗೆ ತಂದಿದ್ದರು. ಬಳಿಕ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿ ಈ ಕಾರನ್ನು
ನವೀಕರಿಸಿದ್ದಾರೆ. ಕಾರಿನ ಮೂಲ ಎಂಜಿನ್‌/ತಾಂತ್ರಿಕ ವಸ್ತುಗಳ ಬಳಕೆ ಮಾಡುವ ಕಾರಣದಿಂದ ಆನ್‌ಲೈನ್‌ನಲ್ಲಿ ಬಿಡ್‌ನ‌ಲ್ಲಿ ಭಾಗವಹಿಸಿ ಬ್ರಿಟನ್‌ನಿಂದ ಸಾಮಗ್ರಿ ಪಡೆದು ಕಾರಿಗೆ ಜೋಡಿಸಲಾಗಿದೆ. 1951ರ ಮೋರಿಸ್‌ ಮೈನರ್‌ (ಎಂ.ಜಿ.) ಕಾರನ್ನು ಗದಗದಿಂದ ಏಳು ವರ್ಷಗಳ ಹಿಂದೆ ತರಲಾಗಿತ್ತು. ಇದಕ್ಕೂ ಬ್ರಿಟನ್‌ನ ಮೂಲ ವಸ್ತುಗಳನ್ನು 10 ಲಕ್ಷ ರೂ. ವೆಚ್ಚ ಮಾಡಿ ಅಳವಡಿಸಲಾಗಿತ್ತು. 1964ರ ಮಾಡೆಲ್‌ನ ಸ್ಟ್ಯಾಂಡರ್ಡ್ ಹೆರಾಲ್ಡ್‌ (ಓಪನ್‌ ಟಾಪ್‌) ಕಾರನ್ನು ಮೂರು ವರ್ಷಗಳ ಹಿಂದೆ ಉತ್ತರಪ್ರದೇಶದಿಂದ ತರಿಸಿದ್ದಾರೆ. ಕಾರ್ಗೊ ಲಾರಿಯಲ್ಲಿ ಬೆಂಗಳೂರಿಗೆ ತಂದು ಬಳಿಕ ಮಂಗಳೂರಿಗೆ ತರಲಾಗಿತ್ತು. 3.5 ಲಕ್ಷ ರೂ.ಗೆ
ಸಿಕ್ಕಿದ ಕಾರಿಗೆ ಅಷ್ಟೇ ಮೊತ್ತದಲ್ಲಿ ನವೀಕರಣವನ್ನು ಮತ್ತೆ ಮಾಡಲಾಗಿದೆ.

Advertisement

ಮನೆ ಹಿರಿಯ ಸದಸ್ಯರಂತೆ ಪ್ರೀತಿ-ಗೌರವ!
ಚಿಕ್ಕಂದಿನಿಂದಲೇ ನನಗೆ ಅಟೋಮೊಬೈಲ್‌ ಕ್ಷೇತ್ರದಲ್ಲಿ ಆಸಕ್ತಿ. ಇದೇ ವಿಷಯದಲ್ಲಿ ಆಟೋಮೊಬೈಲ್‌ ಡಿಪ್ಲೊಮಾ
ಎಂಜಿನಿಯರಿಂಗ್‌ ಮಾಡಿದ್ದೆ. ಈ ವೇಳೆ ಅಂಬಾಸಿಡರ್‌, ಕಾಂಟೆಸ್‌, ಫಿಯೆಟ್‌ ಕಾರು ಚಲಾವಣೆ ಮಾಡುತ್ತಿದ್ದೆ. ಒಂದೆರಡು ವರ್ಷ ಕಾರು ಶೋರೂಂನಲ್ಲಿ ಕೆಲಸ ಮಾಡಿದ್ದೆ. ಜತೆಗೆ ಮನೆಯ ಗದ್ದೆಗೆ ಟಿಲ್ಲರ್‌ ತಂದಾಗ ಅದರ ರಿಪೇರಿ ನಾನೇ ಮಾಡುತ್ತಿದ್ದೆ. ದಿನ ಕಳೆದಂತೆ ಹಳೆಯ ಕಾರಿನ ಕ್ರೇಜ್‌ ಶುರುವಾಯಿತು. ನನ್ನ ಸಹಪಾಠಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ ಹಳೆಯ ಕಾರಿನ ಬಗ್ಗೆ ಆಸಕ್ತಿ ಮೂಡಿತು. ಇದೇ ಕಾರಣದಿಂದ ಕಾರು ಖರೀದಿಗೆ ಮನಸ್ಸು ಮಾಡಿದೆ. ಮನೆಯಲ್ಲಿ ಹಿರಿಯ ವ್ಯಕ್ತಿ ಇದ್ದರೆ ಅವರನ್ನು ಎಷ್ಟು ಪ್ರೀತಿ, ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೋ ಹಾಗೆ ನಾನೂ ಕೂಡ ಹಳೆಯ ಕಾರನ್ನು ನೋಡಿಕೊಳ್ಳುತ್ತೇನೆ. ಸಮಯ ಕಳೆಯಲು ಮನೆ ಮಂದಿ ಇದೇ ಕಾರು/ ಜೀಪಲ್ಲಿ ಕೆಲವೊಮ್ಮೆ ಹೋಗುತ್ತೇವೆ. ಈ ವಾಹನ ಕಂಡಾಗ ಜನರು ಬಹಳಷ್ಟು ಗೌರವ ನೀಡುತ್ತಾರೆ. ಇದನ್ನೇ ಅವಕ್ಕಾಗಿ ನೋಡುತ್ತಾರೆ. ಗಣರಾಜ್ಯೋತ್ಸವದ ವೇಳೆಯಲ್ಲಿ ನೆಹರೂ ಮೈದಾನದಲ್ಲಿ ಇದರ ಪ್ರದರ್ಶನ ಕೂಡ ಇತ್ತು. ವಿದೇಶಿಯರು ಒಮ್ಮೆ ಮಂಗಳೂರಲ್ಲಿ ಸುತ್ತಾಡುವಾಗ ನಾನು ಚಲಾಯಿಸುತ್ತಿದ್ದ ಹೆರಾಲ್ಡ್‌ ಕಾರನ್ನು ನೋಡಿ ಖುಷಿಯಿಂದ ಸಂಭ್ರಮಿಸಿದ ಬಗ್ಗೆ ನೆನಪು ಮಾಡುತ್ತಾರೆ ಕಾರಿನ ಮಾಲಕ ರತ್ನಾಕರ ಭಂಡಾರಿ.

Advertisement

Udayavani is now on Telegram. Click here to join our channel and stay updated with the latest news.

Next