Advertisement

ವಿನೋದ್‌ ಕಾಂಬ್ಳಿ ಈಗ ನಿರುದ್ಯೋಗಿ; ಬಿಸಿಸಿಐ ಪಿಂಚಣಿಯೇ ಜೀವನಕ್ಕೆ ಆಧಾರ

09:41 AM Aug 18, 2022 | Team Udayavani |

ಮುಂಬಯಿ: ವಿನೋದ್‌ ಕಾಂಬ್ಳಿ ಎಂದೊಡನೆ ನೆನಪಾಗುವುದು “ಸಚಿನ್‌ ತೆಂಡುಲ್ಕರ್‌ ಅವರ ಸಹಪಾಠಿ, ಗೆಳೆಯ’ ಎಂದೇ. ಇದೇ ಅವರ ಟ್ಯಾಗ್‌ಲೈನ್‌ ಕೂಡ. ತೆಂಡುಲ್ಕರ್‌ ಕೂಡ ಮೊದಲ ಬಾರಿಗೆ ಸುದ್ದಿಯಾದದ್ದು ಕಾಂಬ್ಳಿಯೊಂದಿಗೆ ನಡೆಸಿದ ಸುದೀರ್ಘ‌ ಬ್ಯಾಟಿಂಗ್‌ ಜತೆಯಾಟದ ಮೂಲಕವೇ. ಆದರೆ ಕಾಲ ಉರುಳಿತು. ತೆಂಡುಲ್ಕರ್‌ ಜಾಗತಿಕ ಕ್ರಿಕೆಟಿನ ಮಹಾನ್‌ ಆಟಗಾರನಾಗಿ ಬೆಳೆದರು, ಕಾಂಬ್ಳಿ ನಿಧಾನವಾಗಿ ಮೂಲೆಗುಂಪಾದರು.

Advertisement

ವಿನೋದ್‌ ಕಾಂಬ್ಳಿ ಅವರ ಕ್ರಿಕೆಟ್‌ ಬದುಕು ದುರಂತ ಮಯವಾಗಲು ಕಾರಣಗಳೇನೇ ಇರಬಹುದು, ಅದನ್ನೆಲ್ಲ ಈಗ ಚರ್ಚಿಸಿ ಪ್ರಯೋಜನವಿಲ್ಲ. ವಾಸ್ತವವೇನೆಂದರೆ, ಕಾಂಬ್ಳಿ ಈಗ ನಿರುದ್ಯೋಗಿ ಎಂಬುದು!

ಹೌದು, ಕಾಂಬ್ಳಿ ಕೈಯಲ್ಲಿ ಈಗ ಯಾವುದೇ ಉದ್ಯೋಗವಿಲ್ಲ. ಬಿಸಿಸಿಐ ನೀಡುತ್ತಿರುವ ಪಿಂಚಣಿಯಲ್ಲಿ ಅವರು ಜೀವನ ಸಾಗಿಸಬೇಕಿದೆ. ಆದರೆ ಈ ಪಿಂಚಣಿಯೇನೂ ಸಣ್ಣ ಮೊತ್ತವಲ್ಲ. ತಿಂಗಳಿಗೆ 30 ಸಾವಿರ ರೂ. ಬರುತ್ತಿದೆ.

“ನಾನೀಗ ನಿರುದ್ಯೋಗಿ. ಬಿಸಿಸಿಐ ಪಿಂಚಣಿಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ’ ಎಂದು ವಿನೋದ್‌ ಕಾಂಬ್ಳಿ ಸಂದರ್ಶನವೊಂದರಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.

ವಿನೋದ್‌ ಕಾಂಬ್ಳಿ ಈ ಹಿಂದೆ ಸಚಿನ್‌ ತೆಂಡುಲ್ಕರ್‌ ಅವರ ಮಿಡ್ಲ್ಸೆಕ್ಸ್‌ ಗ್ಲೋಬಲ್‌ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದರು. ಕಾರಣಾಂತರಗಳಿಂದ ಈ ಕೆಲಸ ತೊರೆದರು. ಅನಂತರ ಸೂಕ್ತ ಕೆಲಸ ಸಿಕ್ಕಿಲ್ಲ.

Advertisement

ಸಚಿನ್‌ ತೆಂಡುಲ್ಕರ್‌ ನನ್ನ ಆತ್ಮೀಯ ಸ್ನೇಹಿತ
“ಸಚಿನ್‌ ತೆಂಡುಲ್ಕರ್‌ಗೆ ನನ್ನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದೆ. ಆದರೆ ಅವರಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ಅವರು ತಮ್ಮ ಮಿಡ್ಲ್ಸೆಕ್ಸ್‌ ಅಕಾಡೆಮಿಯಲ್ಲಿ ಕೆಲಸ ಕೊಟ್ಟಿದ್ದರು. ಇದರಿಂದ ಬಹಳ ಖುಷಿ ಆಗಿತ್ತು. ಬಾಲ್ಯದಿಂದಲೂ ಅವರು ನನ್ನ ಆತ್ಮೀಯ ಸ್ನೇಹಿತ. ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದು ನನಗೆ ಇಷ್ಟ. ಅಂಥ ಕೆಲಸ ಸಿಕ್ಕಿದರೆ ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ. ನನ್ನ ಮತ್ತೋರ್ವ ಗೆಳೆಯ ಅಮೋಲ್‌ ಮಜುಮಾªರ್‌ ಈಗ ಮುಂಬಯಿ ತಂಡದ ಕೋಚ್‌ ಆಗಿದ್ದಾರೆ. ಅವರಿಗೆ ನೆರವು ನೀಡಲು ಸಿದ್ಧ’ ಎಂದಿದ್ದಾರೆ ವಿನೋದ್‌ ಕಾಂಬ್ಳಿ.

ಎಡಗೈ ಬ್ಯಾಟರ್‌ ಆಗಿದ್ದ ವಿನೋದ್‌ ಕಾಂಬ್ಳಿ ಭಾರತ ಪರ 17 ಟೆಸ್ಟ್‌, 104 ಏಕದಿನ ಪಂದ್ಯಗಳನ್ನಾಡಿದ್ದಾರೆ.

ಸಚಿನ್‌ ತೆಂಡುಲ್ಕರ್‌ಗೆ ನನ್ನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ತಿಳಿದಿದೆ. ಆದರೆ ಅವರಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ.
– ವಿನೋದ್‌ ಕಾಂಬ್ಳಿ

Advertisement

Udayavani is now on Telegram. Click here to join our channel and stay updated with the latest news.

Next