ಮೇಡಂ, ನಿರ್ದೇಶನ ಯಾಕೆ ಮಾಡಬಾರ್ಧು? ಹಾಗಂತ ರಾಧಿಕಾ ಪಂಡಿತ್‌ಗೆ ಎಷ್ಟೋ ಬಾರಿ ಅನಿಸಿತ್ತಂತೆ. ಅದಕ್ಕೆ ಕಾರಣ ಅವರ ಜ್ಞಾನ. “ಅವರ ಜೊತೆಗೆ “ನಂದಗೋಕುಲ’ ಧಾರಾವಾಹಿಯಲ್ಲಿ ನಟಿಸಿದ್ದೆ. ಅವರನ್ನು ನೋಡಿದಾಗಲೆಲ್ಲಾ “ವಾಟ್ ಎ ಲೇಡಿ’ ಅಂತನಿಸುತಿತ್ತು. ಅವರಿಂದ ಕಲಿಯೋದು ತುಂಬಾ ಇದೆ. ಅವರಿಗೆ ಹಲವು ವಿಷಯಗಳು ಗೊತ್ತು, ಭಾಷೆಗಳು ಗೊತ್ತು. ಅವರು ಯಾಕೆ ನಿರ್ದೇಶನ ಮಾಡಬಾರದು ಅಂತ ಯಾವಗಲೂ ಅನಿಸುತಿತ್ತು. ಅದೀಗ ನಿಜವಾಗಿದೆ’ ಎಂದು ಖುಷಿಪಟ್ಟರು ರಾಧಿಕಾ ಪಂಡಿತ್.
ನಿರ್ದೇಶನ ಮಾಡಿದರೆ ಚೆನ್ನ ಎಂದು ರಾಧಿಕಾ ಪಂಡಿತ್‌ಗೆ ಅನಿಸಿದ್ದು ವಿನಯಾ ಪ್ರಸಾದ್ ಬಗ್ಗೆ. ಅವರೇ ಹೇಳಿಕೊಂಡಂತೆ, ಅವರಿಬ್ಬರ ಒಡನಾಟ ಹಲವು ವರ್ಷಗಳದ್ದು. ಹಾಗಾಗಿ ತಮ್ಮ “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಹಾಡುಗಳ ಬಿಡುಗಡೆಗೆ ರಾಧಿಕಾ ಪಂಡಿತ್ ಅವರನ್ನು ಕರೆದಿದ್ದರು. ರಾಧಿಕಾ ಪಂಡಿತ್ ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದು ಹಾಡು ಮತ್ತು ಟ್ರೇಲರ್ ಬಿಡುಗಡೆ ಮಾಡಿದ್ದಷ್ಟೇ ಅಲ್ಲ, ವಿನಯಾ ಪ್ರಸಾದ್ ಮತ್ತು ಚಿತ್ರತಂಡಕ್ಕೆ ಶುಭ ಕೋರಿ ಹೋದರು. “ನನ್ನ ಇಷ್ಟವಾದ ನಟಿ ವಿನಯಾ ಪ್ರಸಾದ್ ಅವರು. ಅವರ ಚಿತ್ರಗಳನ್ನು ನೋಡಿ ಬೆಳೆದವಳು ನಾನು. ಅವರು ನಿರ್ದೇಶನ ಮಾಡುತ್ತಿರುವ ವಿಷಯ ಕೇಳಿ, ನಿಜಕ್ಕೂ ಖುಷಿಯಾಯಿತು. ಹಾಡು ಮತ್ತು ಟ್ರೇಲರ್‌ನಲ್ಲಿ ಎನರ್ಜಿ ಇದೆ. ಚಿತ್ರ ಬಿಡುಗಡೆ ಆಗುವುದಕ್ಕೆ ಕಾಯುತ್ತಿದ್ದೀನಿ’ ಎಂದರು.
“ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದಲ್ಲಿ ಇರುವುದು ಒಂದೇ ಹಾಡು ಮತ್ತು ಆ ಹಾಡಿಗೆ ಸಂಗೀತ ಸಂಯೋಜಿಸಿರುವುದು ವಿನಯಾ ಪ್ರಸಾದ್ ಅವರ ಪತಿ ಜ್ಯೋತಿಪ್ರಕಾಶ್ ಆತ್ರೇಯ. ಅವರು ಹಾಡು ಮೂಡಿ ಬಂದ ರೀತಿಯನ್ನು ಹೇಳುವುದರ ಜೊತೆಗೆ, ಚಿತ್ರಕ್ಕೆ ಹಾಡಿದ ರಾಜೇಶ್ ಕೃಷ್ಣನ್ ಅವರಿಗೆ ಧನ್ಯವಾದ ಸಮರ್ಪಿಸಿದರು. ಅವರು ಚಿತ್ರದಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರ ಅಭಿನಯ ನೋಡಿ, ಅವರು ಖಾದರ್ ಖಾನ್ ಲೆವೆಲ್‌ನ ನಟ ಎಂದು ಮಂಜುನಾಥ ಹೆಗಡೆ ಹೇಳಿದರೆ, ಅವರು ಮೆಹಮೂದ್ ಲೆವೆಲ್‌ನ ನಟ ಎಂದು ಛಾಯಾಗ್ರಾಹಕ ಜೆ.ಜಿ. ಕೃಷ್ಣ ಹೇಳಿದರು.
ಚಿತ್ರದಲ್ಲಿ ವಿನಯಾ ಪ್ರಸಾದ್ ಅವರ ಮಗಳು ಪ್ರಥಮಾ ಪ್ರಸಾದ್ ಸಹ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ತಾಯಿ ಯಾವತ್ತೂ ವಿನ್ನರ್ ಎಂದು ಹೇಳಿಕೊಂಡರು. “ಪ್ಲಾನಿಂಗ್ ಮಾಡೋದು ಹೇಗೆ ಅಂತ ಅವರಿಂದ ಕಲಿಯಬೇಕು. ಬಿಪಿ, ಹಾರ್ಟ್ ಸಮಸ್ಯೆ ಇದ್ದವರು ಈ ಚಿತ್ರವನ್ನು ನೋಡಬೇಕು. ಖಂಡಿತಾ ಅಂಥವರಿಗೆ ಖುಷಿಯಾಗುತ್ತದೆ. ನನ್ನದು ತುಂಬಾ ಹೈಪರ್‌ಆ್ಯಕ್ಟೀವ್ ಪಾತ್ರ. ನನ್ನಿಂದ ಸುಮ್ಮನೆ ಕೂರೋಕೆ ಆಗಲ್ಲ. ಜೊತೆಗೆ ಸೆಲ್ಫಿ ಹುಚ್ಚು ಬೇರೆ. ಇದೊಂದು ವಿಭಿನ್ನವಾದ ಪಾತ್ರ’ ಎಂದು ಹೇಳಿಕೊಂಡರು.
ವಿನಯಾ ಪ್ರಸಾದ್ ಹೆಚ್ಚು ಮಾತನಾಡಲಿಲ್ಲ. “ಮನರಂಜನೆ ಜೊತೆಗೆ ಚಿಂತನೆ ಸಹ ಇರಬೇಕು ಎಂದು ಈ ಚಿತ್ರ ಮಾಡಿದ್ದೇವೆ. ಈ ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹವಿರಲಿ’ ಎಂದು ಮಾತು ಮುಗಿಸಿದರು.