ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಯಶಸ್ವಿ ಫ್ರಾಂಚೈಸಿಯಾದ ಮುಂಬೈ ಇಂಡಿಯನ್ಸ್ ತನ್ನ ನೆಟ್ ವರ್ಕ್ ವಿಸ್ತಾರ ಮಾಡುತ್ತಿರುವ ಬಗ್ಗೆ ನೀವು ಈ ಹಿಂದೆ ಓದಿರಬಹುದು. ಮುಂಬೈ ಇಂಡಿಯನ್ಸ್ ತಂಡದ ಮಾಲಕರು ಯುಎಇ ಲೀಗ್ ಮತ್ತು ದಕ್ಷಿಣ ಆಫ್ರಿಕಾ ಲೀಗ್ ನಲ್ಲೂ ತಂಡ ಖರೀದಿ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾ ಟಿ20 ಲೀಗ್ ನ ಎಂಐ ಕೇಪ್ ಟೌನ್ ತಂಡದ ಬಗ್ಗೆ ಫ್ರಾಂಚೈಸಿ ಕೆಲ ದಿನಗಳ ಹಿಂದಷ್ಟೇ ಮಾಹಿತಿ ನೀಡಿತ್ತು. ಇದೀಗ ಯುನೈಟೆಡ್ ಅರಬ್ ಎಮಿರೇಟ್ಸ್ ನ ಇಂಟರ್ ನ್ಯಾಶನಲ್ ಟಿ20 ಲೀಗ್ ನ ತನ್ನ ತಂಡ ಎಂಐ ಎಮಿರೇಟ್ಸ್ ನ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಎಂಐ ಎಮಿರೇಟ್ಸ್ ತಂಡದ ಕೋಚ್ ಗಳ ಬಗ್ಗೆ ಇಂದು ಪ್ರಕಟಿಸಲಾಗಿದ್ದು, ನ್ಯೂಜಿಲ್ಯಾಂಡ್ ನ ಮಾಜಿ ಆಟಗಾರ ಶೇನ್ ಬಾಂಡ್ ಅವರನ್ನು ಮುಖ್ಯ ಕೋಚಾಗಿ ನೇಮಿಸಲಾಗಿದೆ. ಶೇನ್ ಬಾಂಡ್ ಅವರು ಐಪಿಎಲ್ ನಲ್ಲೂ ಮುಂಬೈ ಇಂಡಿಯನ್ಸ್ ಪರ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಶೇನ್ ಬಾಂಡ್ ಅವರಿಗೆ ಸಹಾಯಕರಾಗಿ ಬ್ಯಾಟಿಂಗ್ ಕೋಚ್ ಪಾರ್ಥಿವ್ ಪಟೇಲ್, ಬೌಲಿಂಗ್ ಕೋಚಾಗಿ ಕನ್ನಡಿಗ ವಿನಯ್ ಕುಮಾರ್ ಮತ್ತು ಫೀಲ್ಡಿಂಗ್ ಕೋಚಾಗಿ ಜೇಮ್ಸ್ ಫ್ರಾಂಕ್ಲಿನ್ ಇರಲಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ರಾಬಿನ್ ಸಿಂಗ್ ಅವರು ತಂಡದ ಮ್ಯಾನೇಜರ್ ಆಗಿರಲಿದ್ದಾರೆ.
ಆರು ತಂಡಗಳು ಭಾಗವಹಿಸುವ ಇಂಟರ್ ನ್ಯಾಶನಲ್ ಟಿ20 ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿದೆ. ಐಪಿಎಲ್ ಬಳಿಕ ವಿಶ್ವದ ಶ್ರೀಮಂತ ಟಿ20 ಲೀಗ್ ಇದಾಗಿರಲಿದೆ.
ಎಂಐ ಎಮಿರೇಟ್ಸ್ ತಂಡದಲ್ಲಿ ಕೈರನ್ ಪೊಲಾರ್ಡ್, ಡ್ವೇಯ್ನ್ ಬ್ರಾವೋ, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್ ಮುಂತಾದ ಪ್ರಮುಖರು ಆಡಲಿದ್ದಾರೆ.