Advertisement

ಹಳ್ಳಿಗಳೇ ಭಾರತದ ಆತ್ಮ: ಸೀತಾರಾಮ ಕೆದ್ಲಾಯ

11:13 AM Dec 03, 2018 | Karthik A |

ಉಡುಪಿ: ಹಳ್ಳಿಗಳೇ ದೇಶದ ಆತ್ಮ. ಹಳ್ಳಿಗಳಲ್ಲಿ ಎಲ್ಲರೊಂದಿಗೆ ಬೆರೆತಾಗ ದೇವಮಾನವ ಬದುಕು ನಮ್ಮದಾಗುತ್ತದೆ ಎಂದು ಪಾದಯಾತ್ರೆಯ ಮೂಲಕ ಭಾರತ ಪ್ರದಕ್ಷಿಣೆ ಮಾಡಿದ ಸಾಧಕ ಸೀತಾರಾಮ ಕೆದ್ಲಾಯ ಹೇಳಿದರು. ಉಡುಪಿ ಇಂದ್ರಾಳಿ- ಮಂಚಿಕೋಡಿಯ ಭಾಗ್ಯಶ್ರೀ ಕೊರಗ ಸಮುದಾಯ ಭವನದಲ್ಲಿ ರವಿವಾರ ಜರಗಿದ ‘ಸೌಹಾರ್ದ ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಹಳ್ಳಿಗಳಲ್ಲಿರುವ ಅಮ್ಮಂದಿರು ಈ ಜಗತ್ತಿನ ಆತ್ಮ. ಅವರು ನೀಡಿದ ಶಿಕ್ಷಣವೇ ನಮ್ಮ ಬದುಕನ್ನು ಅರಳಿಸಿದೆ. ಆದರೆ ಮಾನವ ನಿರ್ಮಿತ ಪಠ್ಯ ಆಧರಿತ ಶಿಕ್ಷಣ ಆರಂಭವಾದಂದಿನಿಂದ ನಾವು ವಿಕೃತಿಯೆಡೆಗೆ ಹೊರಳಿದೆವು. ಸುಂದರ ಬದುಕು ನಮ್ಮದಾಗಬೇಕಾದರೆ ಹಳ್ಳಿಗಳ ಕಡೆ ಹೋಗಬೇಕು ಎಂದು ಕೆದ್ಲಾಯ ಹೇಳಿದರು.

Advertisement

ಮಾದರಿ ಕಾರ್ಯಕ್ರಮ
ಶಾಸಕ ರಘುಪತಿ ಭಟ್‌ ಮಾತನಾಡಿ, ಈ ಹಿಂದೆ ಕೊರಗ ಸಮುದಾಯ ಭವನ ಉದ್ಘಾಟನೆ ಸಂದರ್ಭದಲ್ಲಿ ಸೌಹಾರ್ದ ಮಿಲನ ಕಾರ್ಯಕ್ರಮ ನಡೆದಿತ್ತು. ಇದು ಎರಡನೇ ಮಾದರಿ ಕಾರ್ಯಕ್ರಮ. ಇಂತಹ ಸಮುದಾಯಗಳ ಜತೆ ಹೆಚ್ಚು ಬೆರೆತು ಬೇಕಾದ ಸವಲತ್ತುಗಳನ್ನು ಒದಗಿಸಿಕೊಟ್ಟಾಗ ಪರಿವರ್ತನೆ ಸಾಧ್ಯ ಎಂದರು. 

ಪ್ರತ್ಯೇಕ ಮೀಸಲಾತಿ ಬೇಕು
ಕೊರಗ ಸಮುದಾಯದವರಿಗೆ ಪ್ರತ್ಯೇಕ ಮೀಸಲಾತಿ ಬೇಕು. ಕೊರಗ ಸಮುದಾಯ ದಲ್ಲಿ ಆತ್ಮವಿಶ್ವಾಸ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶಾಸಕ ಭಟ್‌ ಹೇಳಿದರು. ಪೇಜಾವರ ಶ್ರೀಗಳು ಆಶೀರ್ವಚನ ನೀಡಿ, ಕೊರಗರಿಗೆ ಮೆರುಗು ನೀಡುವ ಕೆಲಸಗಳು ನಡೆಯಬೇಕಾಗಿವೆ. ಹಿಂದೂ ಸಮಾಜ ಹಾಲು ಸಕ್ಕರೆಯಂತೆ ಜತೆಯಾಗಿ ಸಾಗಬೇಕು. ಕೊರಗ ಸಮಾಜದ ಜತೆ ನಾನು ಸದಾ ಇರುತ್ತೇನೆ ಎಂದರು.

ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ವಿದ್ಯಾರ್ಥಿವೇತನ, ರಘುಪತಿ ಭಟ್‌ ಅವರು ವಸ್ತ್ರಗಳನ್ನು ವಿತರಿಸಿದರು. ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ, ಕಾರ್ಯಕ್ರಮ ಸಂಘಟಕರಾದ ರಮ್ಯಾ ಮತ್ತು ಕೆ. ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು. ಸುಂದರ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಅಶೋಕ್‌ ನಾಯ್ಕ ಸ್ವಾಗತಿಸಿದರು. ದಿವ್ಯಾ ಕಾರ್ಯಕ್ರಮ ನಿರ್ವಹಿಸಿದರು, ಸುಶ್ಮಿತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next