ಕಬಕ: ಬಂಟ್ವಾಳ ಹಾಗೂ ಪುತ್ತೂರು ತಾಲೂಕಿನ ಕುಳ ಹಾಗೂ ವಿಟ್ಲ ಮೂಟ್ನೂರು ಗ್ರಾ.ಪಂ. ವ್ಯಾಪ್ತಿಯ ಕಬಕ- ಕೊಡಿಪ್ಪಾಡಿ- ಓಜಾಲ- ಕುಂಡಡ್ಕ ಜಿ.ಪಂ. ರಸ್ತೆಗೆ ಡಾಮರು ಹಾಕುವಂತೆ ಒತ್ತಾಯಿಸಿ ಆಟೋ ಚಾಲಕರು ಹಾಗೂ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪುತ್ತೂರು ತಾಲೂಕಿನ ಕಬಕ, ಕೊಡಿಪ್ಪಾಡಿ ಹಾಗೂ ಬಂಟ್ವಾಳ ತಾಲೂಕಿನ ವಿಟ್ಲ ಮುಟ್ನೂರು ಗ್ರಾಮಗಳ ವ್ಯಾಪ್ತಿಯ ಈ ರಸ್ತೆ ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈ ರಸ್ತೆಯಲ್ಲಿ ಮೋರಿ, ಚರಂಡಿ, ಟಾರುಗಳು ನಾಪತ್ತೆಯಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಮಾಡಲು ಸಾರ್ವಜನಿಕರು ಆತಂಕ ಪಡುವಂತಹ ದುಃಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಈ ಸಂದರ್ಭ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಹನಿಯೂರು, ಮಳೆ ನೀರು ರಸ್ತೆಯಲ್ಲಿಯೇ ಹರಿಯುವ ಪರಿಣಾಮ ರಸ್ತೆ ನಾಮಾವಶೇಷ ಸ್ಥಿತಿಯಲ್ಲಿದೆ. ರೈತಾಪಿ ವರ್ಗದ ಸಾರ್ವಜನಿಕರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ. ಶಾಲಾ ವಾಹನಗಳು, ಆಟೋ ರಿûಾಗಳು ಸಂಚಾರ ಮಾಡಲು ಅಸಾಧ್ಯವಾಗಿದೆ ಎಂದು ದೂರಿದರು.
ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಬಾಬು, ಕಿರಿಯ ಎಂಜಿನಿಯರ್ ಪದ್ಮರಾಜ್ ಹಾಗೂ ಇಡಿRದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗೋಕುಲದಾಸ ಭಕ್ತ ಸ್ಥಳಕ್ಕೆ ಆಗಮಿಸಿ ಭರವಸೆ ನೀಡಿ ಮನವೊಲಿಸಲು ಪ್ರಯತ್ನಿಸಿದರೂ ಪ್ರತಿಭಟನಕಾರರು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಬಳಿಕ ಪ್ರತಿಭಟನಕಾರರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ವಿಟ್ಲ ಪೊಲೀಸರು ಮನವೊಲಿಸಿ ರಸ್ತೆಯಲ್ಲಿ ಮಲಗಿದ್ದವರನ್ನು ಹೊರಗಡೆ ಕಳುಹಿಸಿದರು. ಬೆಳಗ್ಗೆ 10ಕ್ಕೆ ಪ್ರಾರಂಭಗೊಂಡ ಪ್ರತಿಭಟನೆ ಮಧ್ಯಾಹ್ನ ವರೆಗೂ ಮುಂದುವರಿದ್ದರೂ ಜನಪ್ರತಿನಿಧಿಗಳು ಆಗಮಿಸಲಿಲ್ಲ. ಇದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಯಿತು. ಬಳಿಕ ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗರೂಕತೆ ವಹಿಸಿದರು.
ಇಡಿRದು ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ ಸ್ಥಳಕ್ಕೆ ಭೇಟಿ ನೀಡಿ ಸಾಮಾನ್ಯಸಭೆಯಲ್ಲಿ ನಿರ್ಣಯ ಕೈಗೊಂಡು ಜಿ.ಪಂ.ಗೆ ಕಳುಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಗ್ರಾಮಸ್ಥರಾದ ನಾರಾಯಣ ಶೆಟ್ಟಿ, ಉಮ್ಮರ್ ಕೋರೆ, ಮೂಸೆ ಕುಂಞ, ಉಮ್ಮರ್ ಫಾರೂಖ್, ಕೇಶವ ಪೆಲತ್ತಡಿ, ಸರೋಜಿನಿ, ತಿಲಕ, ಸುಜಿತಾ, ಸ್ಮಿತಾ, ಸಲಾಂ ಕಬಕ, ದಯಾನಂದ, ಲಿಂಗಪ್ಪ ಗೌಡ, ಮುರಳೀಧರ, ಗಣೇಶ ಓಜಾಲ, ರೋಹಿತ್, ರಮೇಶ್ ಭಂಡಾರಿ, ಭರತ್ ಓಜಾಲ, ಭಾಸ್ಕರ ಅಂಜಲ, ವಿನಯ್, ಸಮೀರ್, ನವೀನ, ಮಣಿಕಾಂತ್, ಹರೀಶ, ಚೇತನ್, ಮೊಹಿದು ಕುಂಞ, ಗ್ರಾ.ಪಂ. ಸದಸ್ಯ ಕರುಣಾಕರ, ಜಯರಾಮ ಕಾರ್ಯಾಡಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.