ಬೈಲಹೊಂಗಲ: ನಿಯಮಬಾಹಿರವಾಗಿ ಜಲ್ಲಿ ಕಲ್ಲು ಸಾಗಾಟ ಮಾಡುತ್ತಿದ್ದ ವಾಹನಗಳನ್ನು ತಡೆದು ತಾಲೂಕಿನ ನಾವಲಗಟ್ಟಿ ಗ್ರಾಮಸ್ಥರು ಶನಿವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಮರಿಕಟ್ಟಿ ಗ್ರಾಪಂ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಅಲ್ಲಿ ಉತ್ಪಾದನೆ ಮಾಡಲಾದ ಜಲ್ಲಿಕಲ್ಲು ತುಂಬಿದ ಲಾರಿಗಳು ಯಾವುದೇ ಅನುಮತಿ ಪತ್ರ ಇಲ್ಲದೇ ಮತ್ತು ಹೆಚ್ಚಿನ ಭಾರ ಹೊತ್ತು ಹಗಲು ರಾತ್ರಿ ಎನ್ನದೇ ತಾಲೂಕಿನ ಮರಿಕಟ್ಟಿ, ಶಿಗಿಹಳ್ಳಿ, ಪುಲಾರಕೊಪ್ಪ, ನಾವಲಗಟ್ಟಿ, ತಿಗಡಿ ಮಾರ್ಗವಾಗಿ ಸಂಚರಿಸುವುದರಿಂದ ರಸ್ತೆ ಕುಸಿಯುತ್ತಿದ್ದು, ಗ್ರಾಮಸ್ಥರು ಜಲ್ಲಿಕಲ್ಲು ಸಾಗಾಟ ಮಾಡುತ್ತಿದ್ದ ಸುಮಾರು 15ಕ್ಕೂ ಹೆಚ್ಚು ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಲಾರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೀಡಲಾಗುತ್ತಿರುವ ಅನುಮತಿ ಪತ್ರ ಇಲ್ಲ ಮತ್ತು ಗ್ರಾಮೀಣ ಪ್ರದೇಶಗಳ ರಸ್ತೆಯಲ್ಲಿ ಕೇವಲ 16 ಟನ್ ಭಾರದ ವಸ್ತುಗಳ ಸಾಗಾಟಕ್ಕೆ ಅವಕಾಶ ಇದೆ. ಆದರೆ ಈ ಲಾರಿಗಳು 30 ಟನ್ ಗೂ ಅಧಿಕ ಸಾಗಾಟ ಮಾಡುತ್ತಿರುವದರಿಂದ ರಸ್ತೆಯಲ್ಲಿ ಕುಸಿತ ಕಾಣುವುದರ ಜತೆಗೆ ಕಿತ್ತು ಹೋಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮಸ್ಥರು ಬೈಲಹೊಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ವಿಷಸಯ ತಿಳಿಸಿದರು. ನಾಲ್ಕೈದು ಗಂಟೆ ಅಧಿಕಾರಿಗಳಿಗಾಗಿ ಕಾಯ್ದರೂ ಯಾರೂ ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಮರಳಿ ಬರದಂತೆ ಲಾರಿ ಚಾಲಕರಿಗೆ ಎಚ್ಚರಿಗೆ ನೀಡಿ, ಲಾರಿಗಳನ್ನು ಬಿಟ್ಟು ಕಳುಹಿಸಿದರು.
ಗ್ರಾ.ಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಗೌಡಪ್ಪ ಸಾಣಿಕೊಪ್ಪ, ಸಂತೋಷ ಕಲ್ಲೂರ, ಉಮೇಶ್ ತೋರಣಗಟ್ಟಿ, ರವಿ ಕಲ್ಲೂರ, ನಾಗೇಶ ತಿಳಗಂಜಿ, ಬಸವರಾಜ ಸಾಣಿಕೊಪ್ಪ, ಪರ್ವತ ಮೇಳೆದ ಇತರರು ಇದ್ದರು.