ವಿಜಯಪುರ: ಹೆಚ್ಚುವರಿ ಮತಯಂತ್ರಗಳನ್ನು ಕೊಂಡೊಯ್ಯುವಾಗ ಮತದಾನ ನಿಲ್ಲಿಸಿದ್ದಾರೆಂದು ಗ್ರಾಮಸ್ಥರು ತಪ್ಪು ಕಲ್ಪನೆಯಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಮತಯಂತ್ರಗಳನ್ನು ಒಡೆದು ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಕ್ಷೇತ್ರದ ಮಸಬಿನಾಳ ಗ್ರಾಮದಲ್ಲಿ ನಡೆದಿದೆ.
ಮಸಬಿನಾಳ ಮತಗಟ್ಟೆಯಲ್ಲಿ ಕಾಯ್ದಿರಿಸಿದ್ದ ಇವಿಎಂ ಮಷಿನ್ ಹಾಗೂ ವಿವಿಪ್ಯಾಟ್ ಮಷಿನ್ ಗಳನ್ನು ಒಡೆದು ಹಾಕಲಾಗಿದೆ.
ಗ್ರಾಮಸ್ಥರು ಕಾಯ್ದಿರಿಸಲಾಗಿದ್ದ ಮತಯಂತ್ರಗಳು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ವಾಪಸ್ ತೆಗೆದುಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಮಸಬಿನಾಳ ಗ್ರಾಮದಲ್ಲಿ ಮತದಾನ ಕಾರ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿದ ಗ್ರಾಮಸ್ಥರು ಮತ ಯಂತ್ರ ಒಡೆದು ಹಾಕಿದ್ದಾರೆ.
ಸಾಲದ್ದಕ್ಕೆ ಉದ್ರಿಕ್ತರು ಅಧಿಕಾರಿಗಳ ಕಾರನ್ನು ಬುಡಮೇಲು ಮಾಡಿ ಜಖಂಗೊಳಿಸಿದ್ದಾರೆ. ಕುಪಿತ ಗ್ರಾಮಸ್ಥರು ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿಗಳ ಮೇಲೂ ಹಲ್ಲೆ ಮಾಡಿದದ್ದಾರೆ. ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಇದನ್ನೂ ಓದಿ:PM ಮೋದಿ ವಿರುದ್ಧ ದೂರು ನೀಡಲು ಬಯಸಿದ Pak ನಟಿ; ದೆಹಲಿ ಪೊಲೀಸರ ಉತ್ತರ ಹೇಗಿತ್ತು ಗೊತ್ತಾ!
ಒಂದು ವೇಳೆ ಮತಯಂತ್ರ ಕೆಟ್ಟುಹೋದರೆ ಬಳಕೆ ಮಾಡಲೆಂದು ಕಾಯ್ದಿರಿಸಿದ ಮತಯಂತ್ರಗಳನ್ನು, ವಿವಿಪ್ಯಾಟ್ ಮಷಿನ್ ಮರಳಿ ತರುವಾಗ ಮಸಬಿನಾಳ ಗ್ರಾಮಸ್ಥರು ಸಿಬ್ಬಂದಿಗಳನ್ನು ಪ್ರಶ್ನಿಸಿದ್ದಾರೆ. ಸಿಬ್ಬಂದಿಗಳು ಸರಿಯಾಗಿ ಉತ್ತರಿಸದಿದ್ದಾಗ, ಮತಯಂತ್ರ ಸಾಗಿಸುವ ಅನುಮಾನದಿಂದ ಮತಯಂತ್ರ ಒಡೆದು ಹಾಕಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.