Advertisement

ಕೋಳಿ ತ್ಯಾಜ್ಯ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳಿ

03:30 AM Dec 21, 2018 | Team Udayavani |

ಬಡಗನ್ನೂರು: ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹೊರಗಿನ ವ್ಯಕ್ತಿಗಳು ಕೋಳಿ ಹಾಗೂ ಇತರ ತ್ಯಾಜ್ಯಗಳನ್ನು ತಂದು ಪರಿಸರಕ್ಕೆ ಹಾನಿ ಮಾಡುತ್ತಿದ್ದು, ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗೆ ಬರೆಯಲು ಒಳಮೊಗ್ರು ಗ್ರಾಮ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆ ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋಳಿ ಹಾಗೂ ಇತರ ತ್ಯಾಜ್ಯವನ್ನು ಎಸೆಯುತ್ತಿರುವ ಕುರಿತು ಸದಸ್ಯ ಮಹೇಶ್‌ ರೈ ವಿಷಯ ಪ್ರಸ್ತಾವಿಸಿದರು. ಈ ಬಗ್ಗೆ ಉತ್ತರಿಸಿದ ಪಿಡಿಒ ಗೀತಾ ಎಸ್‌.,  ಒಳಮೊಗ್ರು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಕೋಳಿ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಕೇಂದ್ರದಲ್ಲಿ ಸಂಗ್ರಹಣೆಯಾದ ತ್ಯಾಜ್ಯವನ್ನು ಸ್ಥಳೀಯ ಹಂದಿ ಸಾಕುವವರು ಒಯ್ಯುತ್ತಿದ್ದಾರೆ. ನಾವು ಪರಿಸರದಲ್ಲಿ ಎಸೆಯುತ್ತಿಲ್ಲ ಎಂದು ಮಾಲಕರು ಹೇಳುತ್ತಿದ್ದಾರೆ. ಇದು ಹೊರಗಿನವರ ಕೆಲಸ ಎಂದು ತಿಳಿಸಿದರು.

Advertisement

ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಮಹೇಶ್‌ ರೈ, ಪೊಲೀಸರಿಗೆ ದೂರು ನೀಡೋಣ. ತ್ಯಾಜ್ಯ ಎಸೆಯುವ ವ್ಯಕ್ತಿಗಳನ್ನು ಪತ್ತೆ ಮಾಡಲು ಆಗುವುದಿಲ್ಲ ಎಂದಾದರೆ ಅವರು ತಿಳಿಸಲಿ. ನಾವು ಪತ್ತೆ ಹಚ್ಚಿ ಕ್ರಮ ಕೈಗೊಳ್ಳೋಣ. ಆದರೆ, ತ್ಯಾಜ್ಯ ಎಸೆಯುವ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರು. ಇದಕ್ಕೆ ಸದಸ್ಯ ಶಶಿಕಿರಣ್‌ ರೈ ಧ್ವನಿಗೂಡಿಸಿ, ಪತ್ತೆ ಹಚ್ಚಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಬರುತ್ತಾರೆ ಎಂದರು. ಈ ಕುರಿತು ಚರ್ಚೆ ನಡೆದು, ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗೆ ಬರೆಯಲು ತೀರ್ಮಾನಿಸಲಾಯಿತು.

ಗ್ರಾ.ಪಂ. ಗಮನಕ್ಕೆ ತನ್ನಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಜಿ.ಪಂ. ವತಿಯಿಂದ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಗ್ರಾ.ಪಂ.ನ ಗಮನಕ್ಕೆ ತರಬೇಕು. ಗುತ್ತಿಗೆದಾರರು ಹೇಳಿದ ಸಮಯಕ್ಕೆ ಬಾರದೆ ರಾತ್ರಿ ಹೊತ್ತಿನಲ್ಲಿ ಬಂದು ರಿಂಗ್‌ ಹಾಕುತ್ತಾರೆ. ಎಷ್ಟು ಆಳ ಆಗಿದೆ, ಎಷ್ಟು ನೀರು ಇದೆ ಎಂಬ ಮಾಹಿತಿ ಇರುವುದಿಲ್ಲ. ಗುತ್ತಿಗೆದಾರರು ಹೇಳಿದ ಬಿಲ್‌ ಪಾವತಿ ಮಾಡಿ, ಆಮೇಲೆ ಪಂಪ್‌ ಇಳಿಸಕ್ಕೂ ಆಗದ ಪರಿಸ್ಥಿತಿ ಬಂದಿದೆ. ಹೀಗಾಗಿ, ಗ್ರಾ.ಪಂ. ಗಮನಕ್ಕೆ ತಂದು ಕೊಳವೆಬಾವಿ ತೆಗೆಯುವ ಬಗ್ಗೆ ಜಿ.ಪಂ.ಗೆ ಬರೆಯಲು ನಿರ್ಧರಿಸಲಾಯಿತು.

ಬಿಲ್‌ ಪಾವತಿ ಕಷ್ಟ
ಈವರೆಗೆ ಅಜ್ಜಿಕಲ್ಲು, ಭೈರೋಡಿ, ಕೈಕಾರ ಪ್ರದೇಶದ ಜನರು ಪುತ್ತೂರು ಮೆಸ್ಕಾಂ ಕಚೇರಿಯಲ್ಲೇ ಬಿಲ್‌ ಪಾವತಿಸಲು ಅವಕಾಶವಿತ್ತು. ಮುಂದೆ ಕುಂಬ್ರ ಕಚೇರಿಯಲ್ಲಿ ಪಾವತಿಸುವಂತೆ ಪ್ರಕಟಿಸಿದ್ದಾರೆ. ಈ ಭಾಗದ ಗ್ರಾಹಕರು ಎರಡು ಬಸ್‌ ಬದಲಿಸಿ ವಿದ್ಯುತ್‌ ಬಿಲ್‌ ಪಾವತಿಸಲು ತೆರಳುವುದು ಹೊರೆಯಾಗಿದೆ. ಈ ಭಾಗದಲ್ಲಿ ವಿದ್ಯುತ್‌ ಬಿಲ್‌ ಪಾವತಿ ಕೇಂದ್ರ ತೆರೆಯಲು ನಿರ್ಧರಿಸಿದಲ್ಲಿ ಸೂಕ್ತ ಜಾಗದ ವ್ಯವಸ್ಥೆ ಮಾಡಲಾಗುವುದು ಎಂದು ಸದಸ್ಯ ಮಹೇಶ್‌ ರೈ ತಿಳಿಸಿದರು. ಈ ಬಗ್ಗೆ ಚರ್ಚಿಸಿ, ಮೆಸ್ಕಾಂ ಪುತ್ತೂರು ಗ್ರಾಮಾಂತರ ಕಾರ್ಯನಿರ್ವಾಹಕರಿಗೆ ಬರೆಯಲು ನಿರ್ಣಯಿಸಲಾಯಿತು.

ಗ್ರಾಮದ ಎಲ್ಲ ಕಡೆಗಳಲ್ಲಿ ಬ್ಯಾಟರಿ ರಹಿತ ಸೋಲಾರ್‌ ದೀಪ ಅಳವಡಿಸುವ ಬಗ್ಗೆ ತೀರ್ಮಾನಿಸಲಾಯಿತು. ಇದರ ನಿರ್ವಹಣೆಯ ಜವಾಬ್ದಾರಿಯನ್ನು ಅಯಾ ವಾರ್ಡ್‌ ಸದಸ್ಯರಿಗೆ ವಹಿಸಿ ಕೊಡ ಲಾಯಿತು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸುನಂದಾ ಉಪಸ್ಥಿತರಿದ್ದರು. ಸದಸ್ಯರಾದ ಶೀನಪ್ಪ ನಾಯ್ಕ, ಸುಂದರಿ, ಅಬ್ದುಲ್‌ ರಹಿಮಾನ್‌ ಪಿ.ಎಂ., ವಸಂತಿ ಡಿ., ಚಂದ್ರಕಲಾ, ಜಯರಾಮ ರೈ, ತ್ರಿವೇಣಿ ಉಷಾನಾರಾಯಣ, ಮಹೇಶ್‌ ರೈ, ವಸಂತಿ ಆರ್‌. ಶೆಟ್ಟಿ, ಶಶಿಕಿರಣ್‌ ರೈ ಎನ್‌., ವಸಂತಿ, ಭಾಗೀರಥಿ, ಉಪಸ್ಥಿತರಿದ್ದರು. ಪಿಡಿಒ ಗೀತಾ ಎಸ್‌ ಸ್ವಾಗತಿಸಿ, ಸರ್ಕಾರದ ಸುತ್ತೋಲೆ ವಾಚಿಸಿದರು. ಕಾರ್ಯದರ್ಶಿ ದಾಮೋದರ ವಂದಿಸಿದರು.ಸಿಬಂದಿ ಜಯಶೀಲಾ ರೈ, ಗುಲಾಬಿ, ಕೇಶವ, ಜಾನಕಿ ಎಚ್‌. ಸಹಕರಿಸಿದರು.

Advertisement

ಮರಳು ಸಿಗಲಿ
ಮರಳು ಸಿಗದೆ ಬಡ ಜನರಿಗೆ ಮನೆ ನಿರ್ಮಾಣ ಹಾಗೂ ಇತರ ಕಾಮಗಾರಿ ನಿರ್ವಹಿಸಲು ಕಷ್ಟವಾಗಿದೆ. ನಾನ್‌ ಸಿ.ಆರ್‌.ನಲ್ಲಿ ಮರಳು ತೆಗೆಯಲು ಅವಕಾಶ ದೊರಕಿದೆ. ಆದರೆ, ಬಡಜನರಿಗೆ ನಾನ್‌ ಸಿ.ಆರ್‌. ಇಲ್ಲದೆಯೂ ಮರಳು ಸಿಗಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next