Advertisement
ನೇತ್ರಾವತಿ ನದಿ ತಟದಲ್ಲಿರುವ ಈ ಗ್ರಾಮಕ್ಕೆ ಹರೇಕಳ- ಅಡ್ಯಾರ್ ಸಂಪರ್ಕಿಸುವ ನೂತನ ಸೇತುವೆಯ ನದಿ ತಟದಿಂದ ಪಾವೂರು ಇನೋಳಿ – ಸಜಿಪ ಸಂಪರ್ಕ ರಸ್ತೆ ಅಭಿವೃದ್ಧಿ, ಕೃಷಿ ಭೂಮಿಗೆ ನೀರು ನುಗ್ಗುವುದನ್ನು ತಡೆಯಲು ತಡೆಗೋಡೆ, ಪಾವೂರು ಉಳಿಯಕ್ಕೆ ತೂಗು ಸೇತುವೆ ಸಂಪರ್ಕ ಕಲ್ಪಿಸಿದರೆ ಗ್ರಾಮ ಕೃಷಿ, ಪ್ರವಾಸೋದ್ಯಮದೊಂದಿಗೆ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ್ಯ.
Related Articles
Advertisement
ಸುಮಾರು 38 ಕುಟುಂಬಗಳು, ಒಂದು ಕ್ರೈಸ್ತರ ಧರ್ಮಕೇಂದ್ರವನ್ನು ಹೊಂದಿರುವ ನೇತ್ರಾವತಿ ತಟದ ದ್ವೀಪ ಪಾವೂರು ಉಳಿಯಕ್ಕೆ ಮೇಲಿನ ಅಡ್ಯಾರ್‌ನಿಂದ ತೂಗು ಸೇತುವೆ ಬೇಡಿಕೆ ಕಳೆದ 20 ವರುಷಗಳಿಂದ ಇದೆ. ತೂಗು ಸೇತುವೆಗೆ 6.5 ಕೋಟಿ ರೂ. ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಮಲೆನಾಡು ಅಭಿವೃದ್ಧಿ ಯೋಜನೆಯಡಿ 1.5 ಕೋಟಿ ರೂ. ಬಿಡುಗಡೆಯಾಗಿದ್ದು, ಬಳಿಕ ತಾಂತ್ರಿಕ ಕಾರಣಗಳಿಂದ ಯೋಜನೆ ನನೆಗುದಿಗೆ ಬಿತ್ತು ಎನ್ನುತ್ತಾರೆ ಗ್ರಾ.ಪಂ.ಮತ್ತು ತಾ. ಪಂ.ಮಾಜಿ ಅಧ್ಯಕ್ಷ ಮಹಮ್ಮದ್ ಮೋನು. ಹಿಂದೆ ಬೇಸಗೆ ಕಾಲದಲ್ಲಿ ನದಿಯಲ್ಲಿ ನಡೆದಾಡಿಕೊಂಡು ದಾಟುತ್ತಿದ್ದು, ಮರಳು ಮಾಫಿಯಾದ ಕಾರಣ ನದಿ ಆಳವಾಗಿದೆ. ಕಳೆದ ಐದು ವರುಷಗಳಿಂದ ಬೇಸಗೆ ಕಾಲದಲ್ಲಿ ತಾತ್ಕಾಲಿಕ ಸೇತುವೆಯ ಮೂಲಕ ಜನರು ಪಟ್ಟಣ ಸೇರಿದರೆ, ಮಳೆಗಾಲದಲ್ಲಿ ಸೇತುವೆ ಕಳಚಿ ದೋಣಿಯಲ್ಲೇ ದೈನಂದಿನ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿ ಗಳು ಪರದಾಡುವಂತಾಗಿದೆ.
ಹರೇಕಳ-ಅಡ್ಯಾರ್ ಸೇತುವೆಯಿಂದ ಇನೋಳಿವರೆಗೆ ನದಿ ತಟದಲ್ಲಿ ರಸ್ತೆಯೊಂದಿಗೆ ಕೃಷಿಭೂಮಿಗೆ ನೀರು ಹರಿಯದ ಹಾಗೆ ತಡೆಗೋಡೆ ನಿರ್ಮಾಣವಾದರೆ ಗ್ರಾಮದ ಜನರಿಗೆ ಮಂಗಳೂರು ಸಂಪರ್ಕ 10 ಕಿ. ಮೀ. ಉಳಿತಾಯದೊಂದಿಗೆ ಕೃಷಿ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಯೋಜನೆಗೆ ಸರ್ವೇ ಕಾರ್ಯ ನಡೆದಿದ್ದು, ಯೋಜನೆ ಅನುಷ್ಠಾನವಾಗಬೇಕಾಗಿದೆ. ಇದರೊಂದಿಗೆ ಧಾರ್ಮಿಕ ಪ್ರವಾಸೋದ್ಯಮವಾಗಿರುವ ದೇವಂದಬೆಟ್ಟದ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಸಂಪರ್ಕ ಕಲ್ಪಿಸಲು ಸಾಧ್ಯವಿದ್ದು ಈ ಪ್ರದೇಶ ಪ್ರವಾಸೋದ್ಯಮ ತಾಣವಾಗಲಿದೆ.
ವಿವಿಧ ಬೇಡಿಕೆಗಳು:
ಪಜೀರು, ಬೋಳಿಯಾರ್ ಸಂಪರ್ಕಿಸುವ ಈ ಗ್ರಾಮಕ್ಕೆ ಪದವಿಪೂರ್ವ ಕಾಲೇಜು, ಸರಕಾರಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ಕೊರತೆ ನಿವಾರಣೆ, ಆರೋಗ್ಯ ಕೇಂದ್ರ ಮೇಲ್ದರ್ಜೆಗೆ, ಪಶುಚಿಕಿತ್ಸಾ ಕೇಂದ್ರಕ್ಕೆ ವೈದ್ಯಾಧಿಕಾರಿ, ನಿವೇಶನ ರಹಿತರಿಗೆ ನಿವೇಶನ, ಆಟದ ಮೈದಾನ, ಸರಕಾರಿ ಬಸ್, ಕಂಬಳಪದವು ಪರಿಶಿಷ್ಟ ಜಾತಿ ಕಾಲನಿ ಅಭಿವೃದ್ಧಿ ಪ್ರಮುಖ ಬೇಡಿಕೆಗಳು.
ಪಾವೂರು ಗ್ರಾಮದ ಭಂಡಾರ ಮನೆಯಿಂದ ಹರೇಕಳ ಕಡವು ಬಳಿಗೆ ಸಂಪರ್ಕರಸ್ತೆ, ಇನೋಳಿ ಮಲರಾಯ ದೈವಸ್ಥಾನ ರಸ್ತೆ ಮತ್ತು ಅಭಿವೃದ್ಧಿ, ವೈದ್ಯನಾಥ ದೈವಸ್ಥಾನಕ್ಕೆ ರಸ್ತೆ ಸಂಪರ್ಕ, ಅಲ್ ಮುಬಾರಕ್ ಜುಮಾ ಮಸೀದಿಯಿಂದ ಜುಮಾ ಮಸೀದಿಗೆ ಸಂಪರ್ಕ ರಸ್ತೆ, ಇನೋಳಿ ದೇವಸ್ಥಾನದಿಂದ ಇನೋಳಿ ಕೆಳಗಿನ ಕೆರೆ ರಸ್ತೆ ಅಭಿವೃದ್ಧಿ, ಪಾವೂರು ಗ್ರಾಮ ನಾಟ್ರಕೋಡಿಗ ರಸ್ತೆ ರಚನೆ, ಪಾವೂರು ಕೋರಿಯ ಪ್ರದೇಶಕ್ಕೆ ರಸ್ತೆ ರಚನೆ, ಇನೋಳಿ ಹಿಂದೂ ಶ್ಮಶಾನಭೂಮಿಗೆ ರಸ್ತೆ ಅಭಿವೃದ್ಧಿ, ಮಜಿಕಟ್ಟ ಕಾಲನಿ ರಸ್ತೆ ಅಭಿವೃದ್ಧಿ, ಉಗ್ಗನ ಬೈಲ್ ಸರಕಾರಿ ತೋಡಿಗೆ ಬದಿ ಕಟ್ಟುವುದು ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಬೇಡಿಕೆಯಿದೆ.
ಊರಿನ ಹಿನ್ನೆಲೆ
ಪಾವೂರು ಗ್ರಾಮದ ಬಗ್ಗೆ “ಪಾಂಬುನ + ಊರು “ಪಾಂಬೂರು’ ಕ್ರಮೇಣ ಪಾವೂರು ಆಯಿತು. ನದಿ ತೀರದ ಮುಳುಗಡೆ ಪ್ರದೇಶ ಅಥವಾ ನೆರೆ ನೀರಲ್ಲಿ ತೇಲುವ ಪ್ರದೇಶವನ್ನು ತುಳುವಿನಲ್ಲಿ ಪಾಂಬೂ /ಪಾಂಬುನ ಎನ್ನಲಾಗುತ್ತದೆ. ನೇತ್ರಾವತಿ ನದಿ ತೀರದ ಈ ಮುಳುಗಡೆಯಾಗುತ್ತಿದ್ದ ಪ್ರದೇಶದಲ್ಲಿ ಪಾವೂರು ಎಂಬ ಬಂಟ ಮನೆತನದ ಮನೆಯೊಂದಿತ್ತು. ಹೀಗೆ ಈ ಗ್ರಾಮಕ್ಕೆ ಪಾವೂರು ಎಂಬ ಹೆಸರು ಬಂದಿರಬಹುದು ಎಂಬುದು ಐತಿಹ್ಯ.
ಹಿಂದೆ ಬೇಸಗೆ ಕಾಲದಲ್ಲಿ ನಡೆದಾಡಿಕೊಂಡು ಹೋಗುತ್ತಿದ್ದು, ಮರಳುಗಾರಿಕೆ ಆರಂಭದ ಬಳಿಕ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿ ದೈನಂದಿನ ಕಾರ್ಯಚಟುವಟಿಕೆ ನಡೆಸುತ್ತಿದ್ದೇವೆ. ಇದೀಗ ಅಡ್ಯಾರ್-ಹರೇಕಳ ಸೇತುವೆ ನಿರ್ಮಾಣದ ಬಳಿ ಡ್ಯಾಂನಲ್ಲಿ ನೀರು ನಿಲ್ಲಿಸುವುದರಿಂದ ಮುಂದಿನ ಬೇಸಗೆಯಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸುವುದು ಕಷ್ಟ ಸಾಧ್ಯ. ಈಗಾಗಲೇ ಸಣ್ಣ ದೋಣಿಯಲ್ಲಿ ಮೀನುಗಾರಿಕೆ ನಡೆಸಲು ಕಷ್ಟವಾಗುತ್ತಿದ್ದು, ಮೀನುಗಾರಿಕೆಯನ್ನೇ ವೃತ್ತಿಯನ್ನಾಗಿಸಿದವರಿಗೆ ತೊಂದರೆಯಾಗಲಿದೆ. ಸ್ಥಳೀಯ ಶಾಸಕರು ಇಲ್ಲಿನ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದು, ಬೇಡಿಕೆ ಈಡೇರಿಕೆಗೆ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಪಂಚಾಯತ್ ಆಡಳಿತ ಮುಂದೆ ಬರಬೇಕು.. – ಗಿಲ್ಬರ್ಟ್ ಡಿ’ಸೋಜಾ, ಪಾವೂರು ಉಳಿಯ ನಿವಾಸಿ
ಪಾವೂರು ಗ್ರಾಮದ ಗಡಿಭಾಗವಾಗಿರುವ ಹರೇಕಳ ಕಡವು ಬಳಿ ಸೇತುವೆ ಕಂ ಡ್ಯಾಂ ನಿರ್ಮಾಣವಾಗಿರುವುದರಿಂದ ಪಕ್ಕದ ಕೃಷಿಭೂಮಿಗೆ ನೀರು ನುಗ್ಗಿ ಹಾನಿಯಾಗುವ ಸಂಭವವಿದ್ದು, ಈ ಪ್ರದೇಶದಲ್ಲಿ ಶಾಶ್ವತ ಕ್ರಮವಾಗಿ ತಡೆಗೋಡೆ ನಿರ್ಮಾಣದೊಂದಿಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು. ಗ್ರಾಮದ ಇತರ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲಾಗುವುದು. – ಕಮರುನ್ನೀಸಾ ಅಕ್ಷರ ನಗರ, ಅಧ್ಯಕ್ಷರು, ಪಾವೂರು ಗ್ರಾಮ ಪಂಚಾಯತ್
ವಸಂತ್ ಎನ್. ಕೊಣಾಜೆ