Advertisement

Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ

11:09 PM Nov 18, 2024 | Team Udayavani |

ಮೈಸೂರು: “ಶನಿವಾರ ರಾತ್ರಿ ವೀಡಿಯೋ ಕರೆ ಮಾಡಿದ್ದ ಮಗಳು ಪಾರ್ವತಿ, ಸ್ನೇಹಿತೆಯರೊಂದಿಗೆ ಖುಷಿಯಾಗಿ ಇರುವುದನ್ನು ನಮಗೆಲ್ಲ ತೋರಿಸಿದ್ದಳು. ರವಿವಾರವೇ ವಾಪಸ್‌ ಬರುತ್ತೇವೆ ಎಂದಿದ್ದಳು. ಆದರೆ ಈಗ ಅವಳ ಸಾವಿನ ಸುದ್ದಿ ಬಂದಿದೆ’ ಎಂದು ನಗರದ ಅಗ್ರಹಾರದ ನಿವಾಸಿ ಮಂಜುಳಾ ಕಣ್ಣೀರು ಹಾಕುವಾಗ ಸುತ್ತ ಸೇರಿದ್ದ ಜನರ ಕಣ್ಣುಗಳು ಕೂಡ ಹನಿಗೂಡಿದ್ದವು.

Advertisement

ಉಳ್ಳಾಲದ ರೆಸಾರ್ಟ್‌ನ ಈಜು ಕೊಳದಲ್ಲಿ ಮುಳುಗುತ್ತಿದ್ದ ಸ್ನೇಹಿತೆಯರನ್ನು ಕಾಪಾಡಲು ಹೋಗಿ ಮಗಳು ಪಾರ್ವತಿಯ ತಾನೂ ಮೃತಪಟ್ಟ ಸುದ್ದಿ ಕೇಳಿ ಮಂಜುಳಾ ಅವರಿಗೆ ಸಿಡಿಲು ಬಡಿದಂತೆ ಆಗಿದೆ. ಪುತ್ರಿಯ ಸಾವಿನ ಸುದ್ದಿ ಕೇಳಿದ ಮಂಜುಳಾ ಅವರ ಪತಿ, ಪತ್ರಿಕಾ ವಿತರಕರಾದ ಶ್ರೀನಿವಾಸ್‌ ತತ್‌ಕ್ಷಣವೇ ಕೆಲವು ಸಂಬಂಧಿಕರೊಂದಿಗೆ ಮಂಗಳೂರಿನತ್ತ ತೆರಳಿದರೆ, ಮಂಜುಳಾ ಅವರು ಪುತ್ರಿಯ ಶವದ ಆಗಮನಕ್ಕಾಗಿ ಮನೆಯ ಬಾಗಿಲ ಬಳಿ ರೋದಿಸುತ್ತ ಕುಳಿತಿದ್ದರು. ಸಾಂತ್ವನ ಹೇಳಲು ಬಂದವರಿಗೆ ಕೂಡ ದುಃಖ ತಡೆಯಲಾಗುತ್ತಿರಲಿಲ್ಲ.

ಬಾಲ್ಯದಿಂದಲೂ ಸ್ನೇಹಿತರು
ಪ್ರವಾಸಕ್ಕೆ ತೆರಳಿದ್ದ ಪಾರ್ವತಿ, ನಿಶಿತಾ ಮತ್ತು ಕೀರ್ತನಾ ಬಾಲ್ಯದಿಂದಲೂ ಸ್ನೇಹಿತೆಯರು. ಎಲ್ಲರೂ ಮೈಸೂರಿನ ಮೇಟಗಳ್ಳಿಯಲ್ಲಿರುವ ಜಿಎಸ್‌ಎಸ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೂರನೇ ವರ್ಷದಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದವರು. ವಾರಾಂತ್ಯದ ರಜೆ ಸಿಕ್ಕಿದ್ದರಿಂದ ಎರಡು ದಿನಗಳ ಕಾಲ ಮಂಗಳೂರಿಗೆ ಪ್ರವಾಸ ಕೈಗೊಂಡಿದ್ದ ಮೂವರು ಶುಕ್ರವಾರ ರಾತ್ರಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು.

ಶನಿವಾರ ರಾತ್ರಿ ರೆಸಾರ್ಟ್‌ಲ್ಲಿದ್ದ ವೇಳೆ ಪಾರ್ವತಿ ಅವರು ತಮ್ಮ ತಾಯಿ ಮಂಜುಳಾ ಅವರಿಗೆ ವೀಡಿಯೋ ಕರೆ ಮಾಡಿದ್ದು, ರೆಸಾರ್ಟ್‌ನಲ್ಲಿ ಇರುವುದನ್ನು ತೋರಿಸಿದ್ದಾರೆ. ಮತ್ತೆ ರವಿವಾರ ಬೆಳಗ್ಗೆ ಪಾರ್ವತಿಯವರು ತಂದೆ ಶ್ರೀನಿವಾಸ್‌ ಅವರಿಗೆ ಕರೆ ಮಾಡಿ 11 ಗಂಟೆಯ ಬಳಿಕ ರೆಸಾರ್ಟ್‌ನಿಂದ ಹೊರಡುವುದಾಗಿ ಹೇಳಿದ್ದರು. ಇದಾಗಿ ಸ್ವಲ್ಪವೇ ಸಮಯದಲ್ಲಿ ಆಕೆಯ ಸಾವಿನ ಸುದ್ದಿ ಬಂದಿತ್ತು.

ಕೀರ್ತನಾ ಅವರ ತಂದೆ ನವೀನ್‌ ಕುಮಾರ್‌ ಕೂಡ ವಿಷಯ ತಿಳಿಯುತ್ತಿದ್ದಂತೆ ಮಂಗಳೂರಿಗೆ ಧಾವಿಸಿದ್ದಾರೆ. ಇನ್ನೂ ಕುರುಬಾರ ಹಳ್ಳಿಯ ಮಲ್ಲೇಶ್‌ ಅವರ ಮಗಳಾದ ನಿಶಿತಾ ಕೂಡ ಈ ದುರ್ಘ‌ಟನೆಯಲ್ಲಿ ಮೃತಪಟ್ಟಿದ್ದು, ವಿಷಯ ತಿಳಿಯುತ್ತಿದ್ದಂತೆ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಬೆಳೆದು ನಿಂತ ಹೆಣ್ಣುಮಕ್ಕಳನ್ನು ಕಳೆದುಕೊಂಡ ಹೆತ್ತವರ ಗೋಳು ನೋಡುಗರ ಹೃದಯ ಕರಗಿಸುವಂತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next