ಉಳ್ಳಾಲ: ಮಂಗಳೂರಿನ ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ ಘಟನೆ ರವಿವಾರ (ನ.17) ನಡೆದಿದೆ.
ಮೈಸೂರು ಮೂಲದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಎಂದು ಗುರುತಿಸಲಾಗಿದೆ.
ಈ ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ರವಿವಾರ ಬೆಳಗ್ಗೆ 10.30 ಸಮಯಕ್ಕೆ ಈಜುಕೊಳದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾಗಿದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ರಕ್ಷಣೆಗೆ ಮುಂದಾಗಿದ್ದಾಳೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ.
ಮುಂಜಾನೆ ಉಪಹಾರದ ಸಮಯವಾದ್ದರಿಂದ ರೆಸಾರ್ಟ್ ಸಿಬ್ಬಂದಿ ಈಜುಕೊಳದ ಬಳಿ ಇರಲಿಲ್ಲ ಎನ್ನಲಾಗಿದೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.