ಮೈಸೂರು: ಉಪ ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಗಿರಿ ಇಲ್ಲ ಎಂಬ ಮಾತುಗಳಿಂದ ಸಿಟ್ಟಿಗೆದ್ದಿರುವ ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಪತನ, ಬಿಜೆಪಿ ಸರ್ಕಾರ ರಚನೆಗಾಗಿ ನಡೆದ “ಆಪರೇಷನ್ ಕಮಲ’ ಕುರಿತು ಪುಸ್ತಕ ಹೊರ ತರುವುದಾಗಿ ಹೊಸ ಬಾಂಬ್ ಸಿಡಿಸಿದ್ದಾರೆ.
“ಹಳ್ಳಿಹಕ್ಕಿ ಹಾಡು’ ಪುಸ್ತಕ ಬರೆದು ಹಲವು ರಾಜಕೀಯ ನಾಯಕರ ಬಂಡವಾಳ ಬಯಲು ಮಾಡಿದ್ದ ವಿಶ್ವನಾಥ್, ಸಂಪುಟ ವಿಸ್ತರಣೆಯಲ್ಲಿ ತಮಗೆ ಸ್ಥಾನ ಸಿಗದಿದ್ದರೆ ಆಪರೇಷನ್ ಕಮಲದ ಬಂಡವಾಳ ಬಯಲು ಮಾಡುವ ಒತ್ತಡ ತಂತ್ರ ಪ್ರಯೋಗಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತ ನಾಡಿ, ರಾಜ್ಯದಲ್ಲಿ ಹದಿನಾಲ್ಕು ತಿಂಗಳ ಜೆಡಿಎಸ್-ಕಾಂಗ್ರೆ ಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಏನೆಲ್ಲ ನಡೆಯಿತು, ಆಪರೇಷನ್ ಕಮಲದ ಹಿಂದೆ ಯಾರ್ಯಾರು ಇದ್ದರು, ಮುಂಬೈ, ಕೋಲ್ಕತಾದಲ್ಲಿ ಏನೇನು ನಡೆಯಿತು, 17 ಶಾಸಕರ ರಾಜೀನಾಮೆ ಪ್ರಸಂಗ, ಬಿಜೆಪಿ ಸರ್ಕಾರ ರಚನೆ, ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು,
ಉಪ ಚುನಾವಣೆ, ಬಿಜೆಪಿ ನಾಯಕರ ಜತೆಗೆ ಏನೇನು ಮಾತುಕತೆ ನಡೆಯಿತು ಎಂಬುದನ್ನೆಲ್ಲ ದಾಖಲಿಸಿ ಪುಸ್ತಕ ರೂಪದಲ್ಲಿ ಹೊರ ತಂದು ಜನತೆಗೆ ತಿಳಿಸುತ್ತೇನೆ. ಈಗಾಗಲೇ ಎಲ್ಲ ಮಾಹಿತಿಗಳ ಟಿಪ್ಪಣಿ ಬರೆದಿಟ್ಟುಕೊಂಡಿದ್ದೇನೆ. ಅದಕ್ಕೆ ಅಂತಿಮ ರೂಪ ಕೊಟ್ಟು, ಪುಸ್ತಕ ಹೊರತರುವುದಷ್ಟೇ ಬಾಕಿ ಇದೆ ಎಂದರು. “ಆಪರೇಷನ್ ಕಮಲ’ದಲ್ಲಿ ಬಿಜೆಪಿಯವರು ಮಾತ್ರ ಅಲ್ಲ. ಕಾಂಗ್ರೆಸ್ ನಾಯಕರೂ ಇದ್ದಾರೆ.
ಈ ಎಲ್ಲಾ ವಿಚಾರವನ್ನೂ ಜನರಿಗೆ ತಿಳಿಸಲು ಪುಸ್ತಕ ಹೊರ ತರುತ್ತೇನೆ. ನನಗೆ ಯಾವುದೇ ಪಕ್ಷ, ಆ ಪಕ್ಷದ ಹೈಕಮಾಂಡ್ ಗೊತ್ತಿಲ್ಲ. ನಮಗೆ ಗೊತ್ತಿರುವುದು ಯಡಿಯೂರಪ್ಪ ಮಾತ್ರ. ಅವರು ಕಾಲದ ಧ್ವನಿಯಾಗಬೇಕೇ ವಿನಃ ಪಕ್ಷದ ವರಿಷ್ಠರ ಧ್ವನಿಯಾಗಬಾರದು. ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆಂಬ ನಂಬಿಕೆ, ವಿಶ್ವಾಸ ನನಗೆ ಈಗಲೂ ಇದೆ ಎಂದರು.