ಅಹಮದಾಬಾದ್: 18 ವರ್ಷದ ಯುವತಿಯೊಬ್ಬಳು ಕೊಳವೆಬಾವಿಗೆ ಬಿದ್ದಿರುವ ಘಟನೆ ಗುಜರಾತ್ನ ಕಛ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವುದು ವರದಿಯಾಗಿದೆ.
ಭುಜ್ ತಾಲೂಕಿನ ಕಂಡೇರೈ ಗ್ರಾಮದಲ್ಲಿ ಸೋಮವಾರ (ಜ.6ರಂದು) ಮುಂಜಾನೆ 6:30ರ ಹೊತ್ತಿಗೆ ಈ ಘಟನೆ ನಡೆದಿದೆ.
ರಾಜಸ್ಥಾನದ ವಲಸೆ ಕಾರ್ಮಿಕನ ಕುಟುಂಬಕ್ಕೆ ಸೇರಿರುವ ಇಂದ್ರಾ ಮೀನಾ ಎಂಬ ಯುವತಿ 540 ಅಡಿ ಆಳದ ಕೊಳವೆಬಾವಿಯಲ್ಲಿ 490 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು ಭುಜ್ ಜಿಲ್ಲಾಧಿಕಾರಿ ಎಬಿ ಜಾದವ್ ತಿಳಿಸಿದ್ದಾರೆ.
ಯುವತಿ ಬೋರ್‌ವೆಲ್‌ಗೆ ಬಿದ್ದ ಕೂಡಲೇ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ. ಎನ್‌ಡಿಆರ್‌ಎಫ್ , ಬಿಎಸ್‌ಎಫ್ ಸೇರಿದಂತೆ ಹಲವು ರಕ್ಷಣಾ ತಂಡಗಳು ಯುವತಿಯ ರಕ್ಷಣೆಗೆ ಕಾರ್ಯಾಚರಣೆ ನಡೆಸುತ್ತಿದೆ. ಆಮ್ಲಜನಕ ಒದಗಿಸುತ್ತಿದ್ದು, ಯುವತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ವರದಿಯಾಗಿದೆ.
ಇನ್ನೊಂದು ಯುವತಿ ಬೋರ್ ವೆಲ್ ಹೇಗೆ ಬಿದ್ದಿದ್ದಾಳೆ ಎನ್ನುವ ಬಗ್ಗೆಯೂ ಪ್ರಶ್ನೆ ಮೂಡಿದೆ. ಇತ್ತೀಚೆಗೆ ಯುವತಿಗೆ ನಿಶ್ಚಿತಾರ್ಥ ನಡೆದಿದ್ದು, ಭಾನುವಾರ(ಜ.5ರಂದು) ರಾತ್ರಿ ಜೋಡಿಗಳ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿತ್ತು ಎಂದು ಯುವತಿ ಜೊತೆ ಕೆಲಸ ಮಾಡುತ್ತಿದ್ದ ಫಾತಿಮಾಬಾಯಿ ತಿಳಿಸಿದ್ದಾರೆ. ಹೀಗಾಗಿ ಯುವತಿ ಬೆಳಗ್ಗೆ ಬೋರ್‌ವೆಲ್‌ಗೆ ಹಾರಿದ್ದಾಳೆ ಎಂಬ ಅನುಮಾನವೂ ಮೂಡಿದೆ ಎಂದು ವರದಿ ತಿಳಿಸಿದೆ.
ನನ್ನ ಸಹೋದರಿ ಮತ್ತು ಮಗಳು ಬೆಳಗ್ಗೆ ಬಹಿರ್ದೆಸೆಗೆ ಹೋಗಿದ್ದರು. ವಾಪಾಸ್ ಬರುವಾಗ ನನ್ನ ಮಗಳು ಮಾತ್ರ ಬಂದಿದ್ದಳು. ನನ್ನ ಸಹೋದರಿ ಬಂದಿರಲಿಲ್ಲ. ಹೀಗಾಗಿ ಹೊರಗೆ ಹೋಗಿ ನೋಡಿದಾಗ ನನ್ನ ಸಹೋದರಿ ಬೋರ್‌ವೆಲ್ ಒಳಗಿನಿಂದ ಸಹಾಯಕ್ಕಾಗಿ ಕಿರುಚುತ್ತಿದ್ದಳು ಎಂದು ಯುವತಿಯ ಸಹೋದರ ಲಾಲ್ ಸಿಂಗ್ ಹೇಳಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಕೊಟ್‌ಪುಟ್ಲಿಯಲ್ಲಿ ಬೋರ್ ವೆಲ್ ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾಳನ್ನು ಸತತ 10 ದಿನ ಕಾರ್ಯಾಚರಣೆ ನಡೆಸಿ ಹೊರ ತೆಗೆಯಲಾಗಿತ್ತು. ಆದರೆ ಜೀವಂತವಾಗಿ ಹೊರ ತೆಗೆಯಲು ಆಗಿರಲಿಲ್ಲ.