ಬೆಂಗಳೂರು: ಅನೂಪ್ ಭಂಡಾರಿ ಅವರ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣʼ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ವಿಚಾರದಲ್ಲೂ ಯಾರಿಗೂ ಕಮ್ಮಿಯಿಲ್ಲದಂತೆ ಸಿನಿಮಾ ಬಿಗ್ ಸ್ಕ್ರೀನ್ ನಲ್ಲಿ ಅಬ್ಬರಿಸಿದೆ.
ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಂಡ ಚಿತ್ರ, ಹಲವು ಸಿನಿಮಾಗಳ ದಾಖಲೆಗಳನ್ನು ಉಡೀಸ್ ಮಾಡಿರುವ ಕಿಚ್ಚನ ‘ವಿಕ್ರಾಂತ್ ರೋಣʼ ಸೆ.2 ರಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ.
ಪೊಲೀಸ್ ತನಿಖಾಧಿಕಾರಿಯಾಗಿ ಕೊಲೆಗಳ ರಹಸ್ಯ ಬಯಲು ಮಾಡುವ ಲುಕ್ ನಲ್ಲಿ ಕಾಣಿಸಿಕೊಂಡ ಬಾದ್ ಷಾ ಸುದೀಪ್ ಅವತಾರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಅನೂಪ್ ಭಂಡಾರಿ ಅವರ ಡೈರೆಕ್ಷನ್ ಅಜನೀಶ್ ಲೋಕನಾಥ್ ಮ್ಯೂಸಿಕ್ ಸಿನಿಮಾವನ್ನು ಬೇರೆ ಲೆವೆಲ್ ನಲ್ಲಿ ನೋಡುವಂತೆ ಮಾಡಿತ್ತು. 2ಡಿ, 3ಡಿ ಎರಡರಲ್ಲೂ ಸಿನಿಮಾ ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿತ್ತು.
ಜು.28 ರಂದು ತೆರೆಗೆ ಬಂದಿದ್ದ ‘ವಿಕ್ರಾಂತ್ ರೋಣʼ ಗಣೇಶ ಹಬ್ಬದಂದು ಜೀ5 ಓಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರ ಮಂದಿರದಲ್ಲಿ ಎಷ್ಟು ಅಬ್ಬರವಿತ್ತೋ, ಅಷ್ಟೇ ಅಬ್ಬರದಿಂದ ಓಟಿಟಿಯಲ್ಲೂ ಚಿತ್ರ ಸದ್ದು ಮಾಡುತ್ತಿದೆ.
ಓಟಿಟಿಯಲ್ಲಿ ರಿಲೀಸ್ ಆದ 24 ಗಂಟೆಯೊಳಗೆ ‘ವಿಕ್ರಾಂತ್ ರೋಣʼ 50 ಕೋಟಿ ನಿಮಿಷ ಸ್ಟ್ರೀಮಿಂಗ್ ಆಗಿ ದಾಖಲೆ ಬರೆದಿದೆ. ಈ ಸಂತಸವನ್ನು ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಿರೂಪ ಭಂಡಾರಿ, ನೀತಾ ಅಶೋಕ್,ಮಿಲನಾ ನಾಗರಾಜ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಜಾಕ್ ಮಂಜು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.