ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರ ಬಿಡುಗಡೆಯಾಗಿ ಕೇವಲ ಐದು ದಿನಗಳಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. ವಿಶ್ವಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಿಚ್ಚನ ಚಿತ್ರ ದಿನದಿಂದ ದಿನಕ್ಕೆ ತನ್ನ ಕಲೆಕ್ಷನ್ ಹೆಚ್ಚಿಸಿಕೊಳ್ಳುತ್ತಿದೆ.
ಬಿಡುಗಡೆಯಾದ ಮೊದಲ ದಿನವೇ (ಜುಲೈ 28) 35 ಕೋಟಿ ರೂ ಬಾಚಿದ್ದ ವಿಕ್ರಾಂತ್ ರೋಣ ಚಿತ್ರವು ಇದೀಗ ಐದು ದಿನಗಳಲ್ಲಿ 110 ಕೋಟಿ ರೂ ಗಳಿಸಿದೆ ಎಂದು ವರದಿಯಾಗಿದೆ. ಅಲ್ಲದೆ ಚಿತ್ರದ ಹಿಂದಿ ವರ್ಶನ್ ಸುಮಾರು ಆರು ಕೋಟಿ ರೂ ಗಳಿಸಿದೆ.
ಇದನ್ನೂ ಓದಿ:ಕಾಮನ್‌ವೆಲ್ತ್ ಗೇಮ್ಸ್: ಗ್ರಾಹಕರನ್ನು ದಿಗ್ಭ್ರಮೆಗೊಳಿಸಿದ ಫ್ರೆಂಚ್ ಫ್ರೈಸ್ ಬೆಲೆ!
ಅನೂಪ್ ಭಂಡಾರಿ ನಿರ್ದೇಶನ ಮಾಡಿರುವ ವಿಕ್ರಾಂತ್ ರೋಣ ಚಿತ್ರವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. 3 ಡಿ ಮತ್ತು 2ಡಿ ತೆರೆಕಂಡ ಚಿತ್ರದ ಬಗ್ಗೆ ಎಲ್ಲೆಡೆ ಉತ್ತಮ ಮಾತುಗಳು ಕೇಳಿಬರುತ್ತಿದೆ.
‘ಈಗ’, ‘ಬಾಹುಬಲಿ’, ‘ಸೈರಾ ನರಸಿಂಹ ರೆಡ್ಡಿ’ ಮುಂತಾದ ತೆಲುಗು ಚಿತ್ರಗಳಲ್ಲಿ ನಟಿಸಿದ ಕಾರಣ ಕಿಚ್ಚ ಸುದೀಪ್ ಅವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಉತ್ತಮ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಕಾರಣದಿಂದ ಚಿತ್ರದ ತೆಲುಗು ಅವತರಣಿಕೆಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಕಾರಣಕ್ಕೆ ಕಿಚ್ಚ ಸುದೀಪ್ ಅವರು ತೆಲುಗು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫೆರ್ನಾಂಡಿಸ್, ಮಧುಸೂಧನ್ ರಾವ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಶಾಲಿನಿ ಆರ್ಟ್ಸ್ ಬ್ಯಾನರ್ ನಲ್ಲಿ ಜ್ಯಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದರು.