ವಿಜಯಪುರ : ಖಾಸಗಿ ವಾಹಿನಿಯೊಂದರ ಸ್ಪರ್ಧಿಯ ಬಂಧನದ ಬೆನ್ನಲ್ಲೇ ರಾಜ್ಯದಲ್ಲಿ ಹುಲಿ ಉಗುರು ಹಲವು ಪ್ರಭಾವಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಇದರ ನಡುವೆ ವಿಜಯಪುರ ಜಿಲ್ಲೆಯಲ್ಲೂ ಬಿಜೆಪಿ ಪ್ರಭಾವಿ ನಾಯಕರೊಬ್ಬರ ಮಗನ ಕೊರಳಲ್ಲಿ ಹುಲಿ ಉಗುರು ಸಹಿತ ಸರ ವೈರಲ್ ಆಗಿದೆ.
ಜಿಲ್ಲೆಯ ಬಿಜೆಪಿ ಪ್ರಭಾವಿ ನಾಯಕ ವಿಜುಗೌಡ ಪಾಟೀಲ ಅವರ ಪುತ್ರ ಶಾಶ್ವತಗೌಡ ಪಾಟೀಲ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರುವ ಫೋಟೋ ವೈರಲ್ ಆಗಿದೆ. ಈ ಸುದ್ದಿ ಸಾರ್ವರ್ವಜನಿಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿರುವ ವಿಜುಗೌಡ, ನನ್ನ ಮಗನ ಕೊರಳಲ್ಲಿ ಇರುವುದು ಹುಲಿಯ ಅಸಲಿ ಉಗುರಲ್ಲ, ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.
7 ವರ್ಷಗಳ ಹಿಂದೆ ಡುಪ್ಲಿಕೆಟ್ ಹುಲಿ ಉಗುರು ಖರೀದಿಸಿ ಪೆಂಡೆಂಟ್, ಚಿನ್ನಚೈನ್ ಮಾಡಿದ್ದೇವು. ಈ ಬಗ್ಗೆ ಅನುಮಾನ ಇದ್ದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮಾಡಲಿ, ತನಿಖೆಗೆ ನಾವು ಸಿದ್ಧ. ಅಧಿಕಾರಿಗಳು ಕೇಳಿದರೂ ನಾವು ಚೈನ್ ತೋರಿಸಲು ಸಿದ್ಧರಿದ್ದೇವೆ ಎಂದರು.
ನಮಗೂ ವನ್ಯಜೀವಿ ಕಾಯ್ದೆಯ ಅರಿವಿದೆ, ನಮ್ಮ ಕುಟುಂಬ ಕಾನೂನು ಗೌರವಿಸಿ, ಪಾಲಿಸುತ್ತದೆ. ಇಂಥ ವಿಷಯದಲ್ಲಿ ನಾನು ಚಿಲ್ಲರೇ ರಾಜಕಾರಣ ಮಾಡುವುದಿಲ್ಲ. ಆದರೆ ಕೆಲವರು ನನ್ನ ಮಮಗನ ಫೋಟೋ ಇರಿಸಿಕೊಂಡು ಸಣ್ಣತನದ ರಾಜಕೀಯ ಮಾಡಲು ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಎಂ.ಬಿ.ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕ ವಿಜುಗೌಡ ಪಾಟೀಲ, ಸಚಿವ ಎಂ.ಬಿ.ಪಾಟೀಲ ವಿರುದ್ಧ ಸತತ ಮೂರು ಬಾರಿ ಸೋಲು ಅನುಭವಿಸಿದ್ದಾರೆ.