Advertisement

BJP: ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ನೇಮಕ: ಮೌನಕ್ಕೆ ಶರಣಾದ ಹಿರಿಯರು

12:25 AM Nov 12, 2023 | Team Udayavani |

ಬೆಂಗಳೂರು: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರರನ್ನು ನೇಮಕ ಮಾಡಿದ ಬಳಿಕ ಪಕ್ಷದ ಅನೇಕ ನಾಯಕರು ಮೌನಕ್ಕೆ ಶರಣಾಗಿದ್ದು, ಕನಿಷ್ಠ ಶುಭಾಶಯವನ್ನೂ ಕೋರದೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ನಳಿನ್‌ ಕುಮಾರ್‌ ಕಟೀಲು ಅವರ ಅವಧಿ ಮುಗಿಯುತ್ತಿದ್ದಂತೆಯೇ ಅನೇಕರಲ್ಲಿ ಪಕ್ಷಾಧ್ಯಕ್ಷ ಪಟ್ಟ ಅಲಂಕರಿಸುವ ಕನಸಿತ್ತು. ಅವರನ್ನೇ ಮುಂದುವರಿಸುವ ನಿರ್ಣಯ ಕೈಗೊಂಡಾಗ ಆಸೆ ಕೈಬಿಟ್ಟಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕರ ಆಯ್ಕೆ ವಿಚಾರ ಮುನ್ನೆಲೆಗೆ ಬರುತ್ತಿದ್ದಂತೆ ಪಕ್ಷದಲ್ಲಿ ಮತ್ತೂಮ್ಮೆ ಚಟುವಟಿಕೆಗಳು ಗರಿಗೆದರಿದ್ದವು. ಆಕಾಂಕ್ಷಿಗಳು ಮೈಕೊಡವಿ ಕುಳಿತಿದ್ದರು. ವರಿಷ್ಠರಿಗೆ ತಮ್ಮ ಆಶಯ ಮುಟ್ಟಿಸಲು ಹೆಣಗಾಡಿದವರಿದ್ದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನಾ ಲೆಕ್ಕಾಚಾರ ಹಾಕಿಕೊಂಡು ವಿಜಯೇಂದ್ರರಿಗೆ ಪಟ್ಟ ಕಟ್ಟಿರುವ ಪಕ್ಷದ ವರಿಷ್ಠರು, ಹಲವು ತಿಂಗಳುಗಳಿಂದ ಇದ್ದ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ನಾಯಕತ್ವ ನಿರ್ಧಾರ ಆಗುವವರೆಗೆ ನಾ ಮುಂದು, ತಾ ಮುಂದು ಎಂದು ಪ್ರತಿಕ್ರಿಯಿಸುತ್ತಿದ್ದ ಅನೇಕರು, ರಾಜ್ಯಾಧ್ಯಕ್ಷರ ಘೋಷಣೆ ಆಗುತ್ತಿದ್ದಂತೆ ತಮ್ಮನ್ನು ತೆರೆಗೆ ಸರಿಸುವ ಕೆಲಸ ಆಗಿದೆ ಎಂಬ ಅಸಮಾಧಾನ ಕಟ್ಟೆ ಕಟ್ಟಲಾರಂಭಿಸಿದ್ದಾರೆ.

ಎರಡಲ್ಲಿ ಒಂದು ಹುದ್ದೆ ಖಾಲಿ ಇಲ್ಲ ಎಂಬುದು ಗೊತ್ತಾಗುತ್ತಿದ್ದಂತೆ ಭವಿಷ್ಯದ ಯೋಚನೆಯತ್ತ ಜಾರಿದ್ದಾರೆ. ವಿಜಯೇಂದ್ರ ನೇಮಕದಿಂದ ಕೆಲವರಿಗೆ ಖುಷಿ, ಹಲವರಿಗೆ ಬೇಸರವಾಗಿದೆ. ಪಕ್ಷದ ಚಟುವಟಿಕೆ, ವಯಸ್ಸು, ಅನುಭವಗಳಲ್ಲಿ ಕಿರಿಯರಾದ ವಿಜಯೇಂದ್ರರೊಂದಿಗೆ ಕೆಲಸ ಮಾಡುವ ಬಗ್ಗೆ ಚಿಂತಿತರಾಗಿದ್ದಾರೆ.

ಕಿರಿಯನೊಂದಿಗೆ ಕೆಲಸ ಸಾಧ್ಯವೇ?
ಯಡಿಯೂರಪ್ಪ ಸಂಪುಟದಲ್ಲಿ ಕೆಲಸ ಮಾಡಿದ್ದ ಜಗದೀಶ್‌ ಶೆಟ್ಟರ್‌ ಅವರ, ಬಸವರಾಜ ಬೊಮ್ಮಾಯಿ ಸಿಎಂ ಆಗುತ್ತಿದ್ದಂತೆಯೇ “ಕಿರಿಯ’ ಎನ್ನುವ ಕಾರಣ ಕೊಟ್ಟು ಸಂಪುಟದಿಂದ ಹಿಂದೆ ಸರಿದು ಕೊನೆಗೆ ಬಿಜೆಪಿಯನ್ನೇ ತೊರೆ ದರು. ಯಡಿಯೂರಪ್ಪ ಪುತ್ರ ಎನ್ನುವ ಒಂದೇ ಕಾರಣಕ್ಕೇ ವಿಜಯೇಂದ್ರಗೆ ಪಟ್ಟ ಕಟ್ಟಲಾಗಿದೆ ಎಂಬ ಮಾತುಗಳು ಒಂದೆಡೆ ಚರ್ಚೆಯಲ್ಲಿದ್ದರೆ, ಅವರ ಆಯ್ಕೆಯ ಹಿಂದಿನ ತಂತ್ರಗಾರಿಕೆಯ ಚರ್ಚೆಗಳೂ ಇನ್ನೊಂದೆಡೆ ಇವೆ. ಆದರೆ ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಆಯ್ಕೆ ಸರಿಯಿಲ್ಲ, ಪಕ್ಷದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿದವರನ್ನು ಗುರುತಿಸಿಲ್ಲ, ಕಿರಿಯನೊಂದಿಗೆ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆಗಳಿಗೆ ಹಿರಿಯರ ನಡುವೆ ಚರ್ಚೆಗೆ ಕಾರಣವಾಗಿದೆ.

Advertisement

ಸಮಾಧಾನಗೊಳ್ಳುವರೇ ಹಿರಿಯರು?
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ. ರವಿ ಅವರನ್ನು ಕೈಬಿಡುತ್ತಿ ದ್ದಂತೆ ಅವರೇ ಮುಂದಿನ ರಾಜ್ಯಾಧ್ಯಕ್ಷರು ಎನ್ನುವಂತೆ ಬಿಂಬಿಸಲಾಗಿತ್ತು. ಇದರಿಂದ ಅವರಲ್ಲೂ ಆಕಾಂಕ್ಷೆ ಅಂಕುರವಾಗಿತ್ತು. ಅಷ್ಟರಲ್ಲಿ ಬಸನಗೌಡ ಪಾಟೀಲ್‌ ಯತ್ನಾಳ್‌, ಆರ್‌.ಅಶೋಕ, ಡಾ| ಸಿ.ಎನ್‌. ಅಶ್ವತ್ಥನಾರಾಯಣ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಕೂಡ ಕೇಳಿಬಂದಿತ್ತು. ಮಾಜಿ ಸಚಿವ ವಿ.ಸೋಮಣ್ಣ ಅವರಲ್ಲೂ ಹುದ್ದೆಯ ಆಸೆ ಚಿಗುರಿದ್ದು ಸುಳ್ಳಲ್ಲ.

ಅರವಿಂದ ಬೆಲ್ಲದ್‌ ಅವರಂತೂ ದಿಲ್ಲಿಗೆ ಹೋಗಿ ಬಂದ ಬಳಿಕ ಮುಂದಿನ ರಾಜ್ಯಾಧ್ಯಕ್ಷರ ಆಗಮನವಾಯಿತು ಎನ್ನುವ ಮಟ್ಟಕ್ಕೆ ಬಿಂಬಿತವಾಗಿತ್ತು. ವಿಜಯೇಂದ್ರರಿಗೆ ಪಟ್ಟ ಕಟ್ಟಲು ಕೇಳಿಲ್ಲ ಎನ್ನುವ ಯಡಿಯೂರಪ್ಪರ ಮಾತು ಹಾಗೂ ಅವರಿನ್ನೂ ಪಕ್ಷದಲ್ಲಿ ಪಳಗಬೇಕೆಂದು ವರಿಷ್ಠರೇ ಹೇಳಿದ್ದಾರೆ ಎನ್ನುವ ಮಾತುಗಳು ಅನೇಕರಿಗೆ ಸಮಾಧಾನ ತರಿಸಿದ್ದವು. ಆದರೀಗ ಮೌನಕ್ಕೆ ಶರಣಾಗಿರುವವರನ್ನು ಸಮಾಧಾನಪಡಿಸುವ ಟಾಸ್ಕ್ ಯಾರ ಹೆಗಲಿಗೆ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮಾಜಿ ಸಚಿವರಾದ ಬೈರತಿ ಬಸವರಾಜು, ಮುನಿರತ್ನ, ಎಂ.ಪಿ.ರೇಣುಕಾಚಾರ್ಯ, ಶಾಸಕ ರಾದ ಎಸ್‌.ಆರ್‌.ವಿಶ್ವನಾಥ್‌, ಮುನಿರಾಜು, ಮಾಜಿ ಶಾಸಕ ನೆ.ಲ.ನರೇಂದ್ರಬಾಬು ಸಹಿತ ಪಕ್ಷದ ಅನೇಕ ಮುಖಂಡರ ದಂಡೇ ಆಗಮಿಸಿ ವಿಜಯೇಂದ್ರಗೆ ಅಭಿನಂದನೆ ಸಲ್ಲಿಸಿದೆ. ಆದರೆ ಹಲವರು ಇನ್ನೂ ಕಾಣಿಸಿಕೊಳ್ಳದಿರುವುದು ಅಚ್ಚರಿ ತಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next