Advertisement

BJP ರಾಜ್ಯಾಧ್ಯಕ್ಷರಾಗಿ 100 ದಿನ ಪೂರೈಸಿದ ವಿಜಯೇಂದ್ರ

01:08 AM Feb 18, 2024 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಬಿ.ವೈ.ವಿಜಯೇಂದ್ರ ಶತದಿನ ಪೂರೈಸಿದ್ದು, ಪಕ್ಷದ ಹಿರಿಯರೇ ನಿಬ್ಬೆರಗಾಗುವ ರೀತಿ ಎಲ್ಲರ ಜತೆಯೂ ಸಮನ್ವಯ ಸಾಧಿಸುವ ಪ್ರಯತ್ನ ನಡೆಸಿದ್ದಾರೆ.

Advertisement

ಈ 100 ದಿನಗಳ ಅವಧಿಯಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಕಾರ್ಯಕರ್ತ ಮುಖಂಡರ ಜತೆಗೆ ವಿಜಯೇಂದ್ರ ಸಂವಾದ ನಡೆಸಿದ್ದಾರೆ. ಕೆಲವು ಜಿಲ್ಲೆಗಳಿಗೆ ಎರಡಕ್ಕಿಂತಲೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಒಟ್ಟಾರೆ ನೂರು ದಿನಗಳ ಅವಧಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕಿ.ಮೀ. ಪ್ರಯಾಣ ನಡೆಸಿದ್ದು, ಅತಿ ಕಡಿಮೆ ಅವಧಿಯಲ್ಲಿ ಎಲ್ಲ ಜಿಲ್ಲಾ ಪ್ರವಾಸ ಮಾಡಿದ ರಾಜ್ಯಾಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಹಿರಿಯರ ಮುನಿಸನ್ನು ಕಡಿಮೆ ಮಾಡುವುದಕ್ಕೆ ಅವರು ಪ್ರಯತ್ನ ನಡೆಸಿದ್ದು, ಎಲ್ಲರ ಜತೆಯೂ ಸಮನ್ವಯತೆ ಸಾಧಿಸಿದ್ದಾರೆ. ಬಣ ರಾಜಕಾರಣವನ್ನು ಎಷ್ಟು ಸಾಧ್ಯವೋ ಅಷ್ಟು ತಟಸ್ಥಗೊಳಿಸಿದ್ದು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತಿದ್ದಾರೆ. ಇದು ಬಿಜೆಪಿ ರಾಷ್ಟ್ರೀಯ ನಾಯಕರ ಮೆಚ್ಚುಗೆಗೂ ಪಾತ್ರವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಬಿಜೆಪಿ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಯಾವುದೇ ಅಸಮಾಧಾನ ಹಾಗೂ ಗೊಂದಲವಾಗದಂತೆ ನೋಡಿಕೊಂಡಿದ್ದಾರೆ.

ಮರಳಿ ಗೂಡಿಗೆ
ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಂಘಟನಾತ್ಮಕ ಚಟುವಟಿಕೆಗಳಿಗೂ ಆದ್ಯತೆ ನೀಡಿದ್ದು, ಪಕ್ಷ ಹಾಗೂ ಸಂಘಟನೆ ಮಧ್ಯದ ಬಿರುಕು ಕಡಿಮೆ ಮಾಡಲಾಗುತ್ತಿದೆ. ಪಕ್ಷ ಬಿಟ್ಟು ಹೋದ ಜಗದೀಶ್‌ ಶೆಟ್ಟರ್‌, ಚಿಕ್ಕನಗೌಡ, ಮಾಡಾಳ್‌ ಮಲ್ಲಿಕಾರ್ಜುನ ಮೊದಲಾದವರನ್ನು ಮತ್ತೆ ಬಿಜೆಪಿಗೆ ಕರೆ ತರಲಾಗಿದ್ದು, ಇನ್ನೂ ಹಲವರು ಸದ್ಯದಲ್ಲೇ ಬಿಜೆಪಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next