ಬೆಂಗಳೂರು: ಪಿಎಸ್ ಐ ನೇಮಕ ಹಗರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಹಾಗೂ ಸಚಿವ ಅಶ್ವತ್ಥನಾರಾಯಣ ಅವರ ಹೆಸರೂ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ವಿಜಯೇಂದ್ರ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿ ಬಂದಿದೆ. ನಾನು ವಿಧಾನಸಭೆಯಲ್ಲೇ ಅವರ ಹೆಸರು ಹೇಳಿದ್ದೆ. ಸಿಎಂ ಬಸವರಾಜ್ ಬೊಮ್ಮಾಯಿ ಇವರೆಲ್ಲರಿಗೂ ರಕ್ಷಣೆ ನೀಡುತ್ತಿರುವುದರಿಂದ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಐಡಿಯಿಂದ ನ್ಯಾಯ ಸಿಗುವುದಿಲ್ಲವೆಂದು ನಾನು ಹೇಳಿದ್ದೆ. ಇದರಲ್ಲಿ ದೊಡ್ಡ ದೊಡ್ಡವರು, ಮಂತ್ರಿಗಳಿದ್ದಾರೆ. ಹೀಗಾಗಿ ನ್ಯಾಯಾಂಗ ತನಿಖೆಗೆ ಸದನದಲ್ಲಿ ಒತ್ತಾಯ ಮಾಡಿದ್ದೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ಮಾಡಿ ಎಂದು ಸಿಎಂಗೆ ಪತ್ರ ಬರೆದಿದ್ದೆ. ಆಗ ಮಾತ್ರ ಸತ್ಯ ಹೊರಬರಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ನಾವು ಹೇಳಿದ ಹಾಗೇ ಮಾಡಿಲ್ಲ ಎಂದರು.
ಇದನ್ನೂ ಓದಿ:ಆಪ್ತರ ಪಟ್ಟಿಯಲ್ಲಿ ಡಿಕೆಶಿ ಇದ್ದಾರೆ ಎಂದು ಕೊನೆಗೂ ಹೇಳದ ಸಿದ್ದರಾಮಯ್ಯ!
ನಾವು ಮಂತ್ರಿ ಅಶ್ವಥ್ ನಾರಾಯಣ್ ಮೇಲೂ ಆರೋಪ ಮಾಡಿದ್ದೆವು. ಅವರು ಕಡೆಯವರು ಐವರಿದ್ದಾರೆ. ಅಂದರೆ ಸಚಿವ ಅಶ್ವಥ್ ನಾರಾಯಣ್ ವಿರುದ್ದ ಕ್ರಮ ಕೈಗೊಳ್ಳಬೇಕಲ್ಲವೇ? ಸಿಐಡಿ ಅವರು ಅಶ್ವಥ್ ನಾರಾಯಣ್ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ? ಓಎಂಆರ್ ಶೀಟ್ ತಿದ್ದಿದ್ದಾರೆ. ಒಬ್ಬ ಅಭ್ಯರ್ಥಿಗೆ ಮೂವತ್ತು ಲಕ್ಷದಿಂದ ಒಂದು ಕೋಟಿವರೆಗೂ ತೆಗೆದುಕೊಂಡಿದ್ದಾರೆ. ಇದು ಯಾರ್ಯಾರಿಗೆ ಹೋಗಿದೆ? ಯಾವ ಯಾವ ಮಂತ್ರಿಗೆ ಹೋಗಿದೆ. ಮುಖ್ಯಮಂತ್ರಿಗೆ ಹೋಗಿದೆಯೋ ಇಲ್ಲವೋ ಎಂದು ಗೊತ್ತಾಗಬೇಕಲ್ಲ. ಯಾರ ಜೇಬಿಗೆ ಹೋಗಿದೆ ಎಂಬುದು ಗೊತ್ತಾಗ ಬೇಕಲ್ಲ ಎಂದು ಪ್ರಶ್ನಿಸಿದರು.