Advertisement

ಬಬಲೇಶ್ವರ: ಅಗ್ನಿಕುಂಡ ಹಾಯ್ದ ಭಕ್ತರು

02:55 PM Dec 05, 2019 | Naveen |

ವಿಜಯಪುರ: ಜಿಲ್ಲೆಯ ಬಬಲೇಶ್ವರ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ 61ನೇ ಜಾತ್ರೋತ್ಸ ಡಾ| ಮಹಾದೇವ ಶ್ರೀಗಳ ನೇತೃತ್ವದಲ್ಲಿ ಅದ್ಧೂರಿ ತೆರೆ ಕಂಡಿತು. ಸೂರ್ಯೋದಯ ಸಂದರ್ಭದಲ್ಲಿ ಅಗ್ನಿ ಕುಂಡಕ್ಕೆ ಕಿಡಿ ಹೊತ್ತಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರನ ಪಲ್ಲಕಿ ಮೆರವಣಿಗೆ,  ಮಂಗಲೆಯರ ಆರತಿ, ವಿವಿಧ ಕಲಾ ತಂಡಗಳು, ಕರಡಿ ಮಜಲು ಕುಣಿತ, ವಿವಿಧ ವಾದ್ಯಗಳೊಂದಿಗೆ ಸಾಗಿತು.

Advertisement

ಜಾತ್ರಾ ಸಂಭ್ರಮಕ್ಕೆ ವಿವಿಧ ಭಾಗಗಳಿಂದ ಆಗಮಿಸಿದ್ದ ವೀರಗಾಸೆಯ 400 ಪುರವಂತ ಕಲಾವಿದರು ವೀರಭದ್ರೇಶ್ವರ ದೇವರ ವಿವಿಧ ಅವತಾರ ಬಣ್ಣಿಸಲು ಕಾವಿ ಧೋತರ, ತಲೆಗೆ ಕಾವಿಯ ಪೇಟ, ತೋಳಿಗೆ ಬೆಳ್ಳಿ ನಾಗರ, ಕಿವಿಗೆ ರುದ್ರಾಕ್ಷಿ, ಹಣೆಗೆ ವಿಭೂತಿ, ಸೊಂಟಕ್ಕೆ ಗಂಟೆ, ಕತ್ತಿಗೆ ರುದ್ರಾಕ್ಷಿ ಮಾಲೆ, ಎದೆ ಮೇಲೆ ನರಸಿಂಹನ ಮುಖ, ಕೈಗೂ ರುದ್ರಾಕ್ಷಿ, ಸೊಂಟಕ್ಕೆ ಬಣ್ಣದ ಬಟ್ಟೆ ಧರಿಸಿ ಬಲ ಕೈಯಲ್ಲಿ ಖಡ್ಗ ಹಿಡಿದು ಎಡಗೈಯಲ್ಲಿ ನಿಂಬೆ ಹಣ್ಣಿನ ಶಸ್ತ್ರ ಹಿಡಿದು ಮೆರವಣಿಗೆಯಲ್ಲಿ ವೀರಗಾಥೆ ಹೇಳುತ್ತ ಸಾಗಿದರು.

ಶಸ್ತ್ರಗಳನ್ನು ಎರಡು ಕೈಗಳಿಗೆ, ನಾಲಗೆಗೆ, ಕಣ್ಣಿನ ಹುಬ್ಬಿಗೆ ಏಕ ಕಾಲದಲ್ಲಿ ಚುಚ್ಚಿಕೊಂಡು, ಇದೇ ಶಸ್ತ್ರವನ್ನು ಇನ್ನೊಬ್ಬ ಪುರವಂತ ಇದೇ ಮಾದರಿಯಲ್ಲಿ ಏಕ ಕಾಲದಲ್ಲಿ ಚುಚ್ಚಿಕೊಂಡು ವೀರಭದ್ರೇಶ್ವರನ ಪವಾಡ ಪ್ರದರ್ಶಿಸಿದರು.

ವೀರಗಾಸೆಯ ಸಾಹಸಿ ಕಲಾವಿದರಾದ ಹಿಟ್ನಳ್ಳಿ ಗ್ರಾಮದ ಶಿವಾನಂದ ಬಗಲಿ, ಬಬಲೇಶ್ವರದ ಬಸಪ್ಪ ಸುಕಾಲಿ ಎಂಬವರು ಕಪಾಳದ ಚರ್ಮಕ್ಕೆ 1,050 ಅಡಿ ಉದ್ದದ ತಂತಿಯ ಶಸ್ತ್ರ ಹಾಕಿ ಬಾಯಿಯಿಂದ ಹೊರ ತೆಗೆಯುವ ಮೂಲಕ ವಿಶಿಷ್ಟ ಪರಂಪರೆಯ ಸಾಹಸ ಮೆರೆದರು.

ವೀರಗಾಸೆಯ ಕಲಾವಿದರಾದ ಕಲ್ಲಪ್ಪ ಮನಗೊಂಡ, ಚನ್ನಪ್ಪ ಭದ್ರನವರ, ಈರಯ್ಯ ಹಿರೇಮಠ, ಈರಪ್ಪ ಸುಕಾಲಿ, ದುಂಡಪ್ಪ ಮೇಡೆಗಾರ, ಹನುಮಂತ ತಾಯಿಗೊಂಡ ಇತರರು ಕಡ್ಡಿ ಕೆರೆಯದೇ ಬೆಂಕಿ ಸೃಷ್ಟಿಸಿ ಕರ್ಪೂರ ಹೊತ್ತಿಸುವ ಮೂಲಕ ನೆರೆದ ಭಕ್ತರಿಂದ ಭಕ್ತಿಯ ಚಪ್ಪಾಳೆ ಗಿಟ್ಟಿಸಿದರು. ಐಟಿಜಿಟಿ ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆಯಲ್ಲಿ ಸಾಗಿದ್ದ ವೀರಗಾಸೆಯ ಕೆಲ ಕಲಾವಿದರು ಖಾಲಿ ಕೊಡದಲ್ಲಿ ಅಕ್ಕಿ ತುಂಬಿ, ಆ ಅಕ್ಕಿ ತುಂಬಿದ ಕೊಡಕ್ಕೆ ಕತ್ತಿಯ ಶಸ್ತ್ರ ಚುಚ್ಚಿ ಕೊಡವನ್ನು ಮೆಲಕ್ಕಿತ್ತಿ ಸಾಹಸ ಮೆರೆದುದು ಭಕ್ತರಲ್ಲಿ ಸಂಭ್ರಮ ಮೂಡಿಸಿತ್ತು.

Advertisement

ಮತ್ತೂಂದೆಡೆ ಜಾತ್ರೆ ನಿಮಿತ್ತ ಹರಕೆ ಹೊತ್ತ ಭಕ್ತರು ದೇವಸ್ಥಾನದ ಎದುರು ಹಾಕಿದ್ದ ಅಗ್ನಿ ಕುಂಡದಲ್ಲಿ ಹಾಯುವ ಮೂಲಕ ತಮ್ಮ ಹರಕೆ ತೀರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next