Advertisement

ಎಪಿಎಂಸಿ-ಭೂ ಸುಧಾರಣೆ ಕಾಯ್ದೆ ತಿದುಪಡಿಗೆ ವಿರೋಧ

11:48 AM Jun 28, 2020 | Naveen |

ವಿಜಯಪುರ: ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಪಿಎಂಸಿ, ಭೂ ಸುಧಾರಣೆ ಸೇರಿದಂತೆ ರೈತರು ಹಾಗೂ ಕೃಷಿ ಸಂಬಂಧಿತ ಹಲವು ಕಾಯ್ದೆಗಳನ್ನು ತಿದ್ದುಪಡಿ ಮಾಡಿದೆ. ಇದರಿಂದ ರೈತರನ್ನು ವಂಚಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ಆರೋಪಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಜಮಾಯಿಸಿದ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಅಖೀಲ ಭಾರತ ರೈತ ಸಂಘರ್ಷ
ಸಮನ್ವಯ ಸಮಿತಿಯಿಂದ ಪ್ರತಿಭಟನಾ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಪೋರೇಟ್‌ ಕೃಷಿ ಹಿಮ್ಮೆಟ್ಟಿಸಿ, ರೈತಾಪಿ ಕೃಷಿ ರಕ್ಷಿಸಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಧಿಕ್ಕಾರ, ಭೂ ಸುಧಾರಣೆ ಕಾಯ್ದೆ, ವಿದ್ಯುತ್‌ ಕಾಯ್ದೆ, ಬೀಜ ಕಾಯ್ದೆ ತಿದ್ದುಪಡಿ ಮಾಡುತ್ತಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ನಂತರ ಸ್ಥಳಕ್ಕಾಗಮಿಸಿದ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್‌ ಅವರಿಗೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಬರೆದ ಮನವಿ ಸಲ್ಲಿಸಿದರು.

ಪ್ರಾಂತ ರೈತ ಸಂಘದ ಮುಖಂಡ ಭೀಮಶಿ ಕಲಾದಗಿ ಮಾತನಾಡಿ, ಹಲವು ವರ್ಷಗಳಿಂದ ರೈತರು ನಡೆಸಿದ ಹೋರಾಟದ ಫಲವಾಗಿ ರಾಜ್ಯದಲ್ಲಿ ಊಳುವವನೇ ಹೊಲದೊಡೆಯ ತತ್ವದ ಕಾಯ್ದೆ ಜಾರಿಗೆ ಬಂದಿದೆ. ಆದರೆ ಇದೀಗ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾನೂನುಗಳನ್ನು ಸಂಪೂರ್ಣ ನಾಶ ಮಾಡಲು ಕಾಯ್ದೆಗೆ ತಿದ್ದುಪಡಿ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಕೃಷಿ ಕಾರ್ಮಿಕರ ಸಂಘಟನೆಯ ಭಗವಾನರೆಡ್ಡಿ ಮಾತನಾಡಿ, ಕಾರ್ಪೋರೇಟ್‌ ಕಂಪನಿಗಳ ಗುಲಾಮರಂತೆ ವರ್ತಿಸುತ್ತಿರುವ ಆಳುವ ಸರ್ಕಾರಗಳು, ಬಂಡವಾಳಗಾರರು ಕೃಷಿ ಭೂಮಿ ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸಿ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಭಾರತೀಯ ಕೃಷಿ ವ್ಯವಸ್ಥೆ ನಾಶ ಮಾಡಲು ಹೊರಟಿವೆ. ದೇಶದಲ್ಲಿ ಇಂಧನ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರಗಳು ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಜನರ ದಿಕ್ಕನ್ನು ಬೇರೆಡೆ ಸೆಳೆಯಲು ಜನ ವಿರೋಧಿ ಕಾನೂನು ಜಾರಿಗೆ ತರಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಣ್ಣಾರಾಯ ಈಳಗೇರ, ಅರವಿಂದ ಕುಲಕರ್ಣಿ, ಬಾಳು ಜೇವೂರ, ಸದಾನಂದ ಮೋದಿ, ಬಾಪುಗೌಡ ಬಿರಾದಾರ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಪ್ರತಿಭಟಿಸದಿರುವ ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾಗಿವೆ. ಪರಿಣಾಮ ಸಂಸತ್‌ನಲ್ಲಿ ಮಂಡಿಸದೇ ಈಗಿರುವ ಕಾಯ್ದೆಗಳಿಗೆ ಅಸಂವಿಧಾನಿಕವಾಗಿ ಸುಗ್ರೀವಾಜ್ಞೆ ಮೂಲಕ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ ಎಂದು ಟೀಕಿಸಿದರು. ಈ ವೇಳೆ ವಿವಿಧ ಸಂಘಟನೆಗಳ ಪ್ರಮುಖರಾದ ಪ್ರಕಾಶ ಹಿಟ್ನಳ್ಳಿ, ಡಾ.ಎಸ್‌.ಬಿ. ಪಾಟೀಲ, ಸುನಿಲ ಸಿದ್ರಾಮಶೆಟ್ಟಿ, ಆಕಾಶ ಪಾಟೀಲ, ತಿಪರಾಯ ಹತ್ತರಕಿ, ಪ್ರಕಾಶ ಕಿಲಾರೆ, ವಿಶ್ವನಾಥ ನರಳೆ, ಪ್ರಾಂತ ರೈತ ಸಂಘದ ಸಿದ್ರಾಮ ಬಂಗಾರಿ, ಖಾಜಾಸಾಬ ಕೊಲಾರ, ಧರೆಪ್ಪ ಅವಟಿ, ಪುಂಡಲೀಕ ಹಂದಿಗನೂರ, ಪರಶುರಾಮ ಮಂಟೂರ, ಸದಾಶಿವ ಬರಟಗಿ ಚಂದ್ರಾಮ ತೆಗ್ಗಿ, ಬಿ.ಬಿ. ಬಿರಾದಾರ, ಸುಮಿತ್ರಾ ಘೊಣಸಗಿ, ಸೋನುಬಾಯಿ ಬಾಳಿ, ಬೀಮವ್ವ ಹಡಪದ, ಅನುಸುಯಾ ಹಜೇರಿ ಇತರರು ಇದ್ದರು.

Advertisement

ಕೇಂದ್ರ -ರಾಜ್ಯ ಸರ್ಕಾರಗಳು ತಿದ್ದುಪಡಿ ಕಾಯ್ದೆ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿವೆ. ರೈತರು, ಕೃಷಿ ಕೂಲಿಕಾರರ ಒಡೆತನದಲ್ಲಿ ಇರುವ ಕೃಷಿ ಭೂಮಿಯನ್ನು ಅದರಲ್ಲೂ ಸಣ್ಣ-ಅತಿ ಸಣ್ಣ ರೈತರು ಆರ್ಥಿಕ ಸಂಕಷ್ಟಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸುವ ವ್ಯವಸ್ಥಿತ ಹುನ್ನಾರದ ಕಾನೂನು ಜಾರಿಗೆ ತಂದಿವೆ.
ಭೀಮಶಿ ಕಲಾದಗಿ,
ಪ್ರಾಂತ ರೈತ ಸಂಘದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next