ನಾಲತವಾಡ:‘ಉಪ್ಪಿಗಿಂತ ರುಚಿ ಇಲ್ಲ, ಸ್ನೇಹಕ್ಕಿಂತ ಬಂಧುವಿಲ್ಲ’ ಎನ್ನುತ್ತಾರೆ. ಹೌದು, ರಕ್ತ ಸಂಬಂಧಗಳನ್ನು ಮೀರಿದ್ದು ಈ ಸ್ನೇಹ ಸಂಬಂಧ. ಕೋಮು ಸೌಹಾರ್ದತೆಗೆ ಸಾಕ್ಷಿಯಂತಿದೆ ಈ ಒಂದು ಕೆಲಸ. ಮುಸ್ಲಿಂ ಸ್ನೇಹಿತನ ಅಕಾಲಿಕ ಮರಣದಿಂದ ದಿಕ್ಕಿಲ್ಲದಂತಾಗಿದ್ದ ಆತನ ಕುಟುಂಬಕ್ಕೆ ಹಿಂದು ಸ್ನೇಹಿತರು,ಮೃತ ಸ್ನೇಹಿತನ ಕನಸಾದ ಮಕ್ಕಳ ಶಿಕ್ಷಣದ ಸಲುವಾಗಿ ಬ್ಯಾಂಕ್ ನಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ರೂಪಾಯಿಗಳ ಎಫ್ ಡಿ ಮಾಡುವ ಮೂಲಕ ಸ್ನೇಹಕ್ಕೆ ಸಾವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
ನಾಲತವಾಡದ ಯುವಕರು ತಮ್ಮ ಬಾಲ್ಯದ ಗೆಳೆಯ ಖಾಸೀಮಸಾಹೇಬ್ ಸಿಕ್ಕಲಗಾರ(36)ನ ಅಕಾಲಿಕ ಮರಣದಿಂದ ಅನಾಥವಾಗಿದ್ದ ಆತನ ಮಕ್ಕಳು,ಪತ್ನಿ,ತಂದೆ ತಾಯಿಗೆ ಆಸರೆಯಾಗಲು ಹತ್ತೇ ದಿನದಲ್ಲಿ ಲಕ್ಷಕ್ಕೂ ಅಧಿಕ ಹಣ ಹೊಂದಿಸಿ ಕೊಟ್ಟು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿಕೊಡುವ ಮೂಲಕ ಹಿಂದೂ -ಮುಸ್ಲಿಂ ಬಾಯ್ ಬಾಯ್ ಎಂದು ಕೋಮು ಸೌಹಾರ್ದತೆ ಮರೆದಿದ್ದಾರೆ.
ಪಟ್ಟಣದ ವೃದ್ಧ ದಂಪತಿಗಳಾದ ಅಮೀನವ್ವ ಮತ್ತು ರಾಜೇಸಾಹೇಬ ದಂಪತಿಗೆ ಆಸರೆಯಾಗಿದ್ದ ಒಬ್ಬನೇ ಮಗ ಖಾಸೀಮಸಾಹೇಬ (36) ಕಿಡ್ನಿ ವೈಫಲ್ಯದಿಂದ ಅಕಾಲಿಕ ಮರಣಹೊಂದಿದ್ದರು. ಮನೆಗೆ ಆಧಾರವಾಗಿದ್ದ ಪತಿಯನ್ನು ಕಳೆದುಕೊಂಡ ಪತ್ನಿ ರೇಶ್ಮಾಳು ತನ್ನ ಮೂವರು ಪುಟ್ಟ ಮಕ್ಕಳಿಗೆ ಊಟ ಹಾಕುವುದೇ ಸವಾಲಾಗಿತ್ತು,ಮಕ್ಕಳ ಶಿಕ್ಷಣದ ಕನಸು ಕಂಡಿದ್ದ ಪತಿಯ ಆಸೆ ಈಡೇರಿಸುವುದಂತೂ ಕನಸಿನ ಮಾತೆಂದು ಕಂಗಾಲಾದ ಕುಟುಂಬಕ್ಕೆ ಸಾಂತ್ವನದ ಜೊತೆಗೆ ಲಿಂಗಾಯತ,ಹಿಂದೂ ಸ್ನೇಹಿತರ ಸಹಾಯ ಹರಿದುಬಂತು.
ಇದನ್ನೂ ಓದಿ:ಚಿಕ್ಕಮಗಳೂರು: ಬಾಲಕಿಯ ಮೇಲೆ ಅತ್ಯಾಚಾರ; ಯುವಕನ ಬಂಧನ
ಸಹೃದಯಿ ಈ ಯುವಕರು ತಮ್ಮ ಗೆಳೆಯನ ಪತ್ನಿ,ಮಕ್ಕಳು ಹಾಗೂ ತಂದೆ ತಾಯಿಯ ಪೋಷಣೆಗಾಗಿ ಸಂಸಾರದ ಬಂಡಿ ಸಾಗಲು ಕುಟುಂಬದ ಖರ್ಚಿಗೆ ವಯಕ್ತಿಕ ನಿಧಿಯನ್ನೂ ಸಹ ನೀಡಿದ್ದು, ಮಾನವೀಯ ಮೌಲ್ಯದ ನಿದರ್ಶನ ಎನ್ನಬಹುದು.ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಖಾಸೀಮಸಾಹೇಬ ಒಬ್ಬನೇ ಆಧಾರವಾಗಿದ್ದ. ಆತನೇ ದುಡಿದು ಕುಟುಂಬವನ್ನು ಸಲಹುತ್ತಿದ್ದ. ಬಡತನದಿಂದ ತಾನು ಇತರರಂತೆ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದ ಖಾಸೀಮ್ ತನ್ನ ಮಕ್ಕಳಿಗಾದರೂ ಗುಣಮಟ್ಟದ ಶಿಕ್ಷಣ ಕೊಡಿಸುವ ಕನಸು ಕಂಡಿದ್ದ. ಅದಕ್ಕಾಗಿ ಖಾಸಗಿ ಖಾರ್ಕಾನೆಯಲ್ಲಿ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ, ಅದರೆ ವಿಧಿಯಾಟ ಕಳೆದ ಏಳು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಡಯಾಲಿಸೀಸ್ ಮಾಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ದುರ್ಬಲನಾದ,ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಆಸೆಯು ವಿಧಿಯಾಟದ ಮುಂದೆ ಸೋತು ಬಾಳ ಪಯಣ ಮುಗಿಸಿದ್ದ.
ಖಾಸೀಮ್ನ ಕನಸು ನನಸು ಮಾಡುವ ಪಣ ತೊಟ್ಟ ಆತನ ಸ್ಥಳೀಯ ಸ್ನೇಹಿತರು ಪರ ಊರಲ್ಲಿರುವ ಇತರೆ ಸ್ನೇಹಿತರನ್ನು ಸಂಪರ್ಕಿಸಿ ನೆರವು ಪಡೆದು ತಮ್ಮ ಹಣವನ್ನೂ ಹಾಕಿ ಬ್ಯಾಂಕಿನಲ್ಲಿ ಪಿಕ್ಸ್ ಡಿಪಾಸಿಟ್ ಇಡುವ ಮೂಲಕ ಮೃತನ ಕುಟುಂಬಕ್ಕೆ1. 50 ಲಕ್ಷ ದೇಣಿಗೆ ನೀಡುವ ಮೂಲಕ ಸ್ನೇಹ ಅಮರ ಎಂದಿದ್ದಾರೆ.
ಇತರರಿಗೂ ಮಾದರಿಯಾದ ಕಾರ್ಯ:ಖಾಸೀಮ್ ನ ಗೆಳೆಯರು ಹಿತೈಷಿಗಳ ಕಾರ್ಯಕ್ಕೆ ಪಟ್ಟಣದ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಖಾಸೀಮ್ ನ ಪತ್ನಿ, ತಂದೆ ತಾಯಿಯ ಜೀವನಾಧಾರಕ್ಕೆ ಏನಾದರೂ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
‘ಕಷ್ಟಕ್ಕೆ ಬಂಧುಗಳೇ ಆಗದ ಈ ಕಾಲದಲ್ಲಿ ಸ್ನೇಹಕ್ಕಾಗಿ, ವೃದ್ಧ ದಂಪತಿ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಲು,ಪುಟ್ಟ ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು ನೀಡಿದ ಪಟ್ಟಣದ ಯುವಕರ ಕಾಳಜಿ ಇತರರಿಗೆ ಮಾದರಿಯಾಗಿದೆ’
ಶಶಿಕಲಾ ಗೊಳಸಂಗಿ ಮುಖ್ಯಶಿಕ್ಷಕಿ ಸರ್ಕಾರಿ ವಿನಾಯಕ ನಗರ ಶಾಲೆ ನಾಲತವಾಡ
ಕಾಶಿನಾಥ ಬಿರಾದಾರ