Advertisement

Vijayapura Municipality mayor Election: ಸದಸ್ಯರೊಂದಿಗೆ ವಿಜಯೇಂದ್ರ ಸಭೆ

09:58 AM Dec 31, 2023 | keerthan |

ವಿಜಯಪುರ: ಶನಿವಾರ ಜಿಲ್ಲೆಯ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಿಗದಿತ ಕಾರ್ಯಕ್ರಮಗಳ ಬಳಿಕ ಪಕ್ಷದ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರೊಬ್ಬರ ಮನೆಯಲ್ಲಿ ಮೇಯರ್-ಉಪ ಮೇಯರ್ ಚುನಾವಣೆ ಕುರಿತು ಬಿಜೆಪಿ ಸದಸ್ಯರೊಂದಿಗೆ ಸಭೆ ನಡೆಸಿದ್ದಾರೆ.

Advertisement

ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ತಮ್ಮೊಂದಿಗೆ ಭೇಟಿಗೆ ಅವಕಾಶ ನೀಡುವಂತೆ ಬಿಜೆಪಿ ಪಾಲಿಕೆ ಸದಸ್ಯರು ಬೇಡಿಕೆ ಇಟ್ಟಿದ್ದರು. ಹೀಗಾಗಿ ಜ್ಞಾನಯೋಗಾಶ್ರಮದ ಕಾರ್ಯಕ್ರಮದ ಬಳಿಕ 12ನೇ ವಾರ್ಡ್ ಸದಸ್ಯೆ ರಶ್ಮಿ ಕೋರಿ ಅವರ ಮನೆಯಲ್ಲಿ ಪಾಲಿಕೆಯ ಬಿಜೆಪಿ ಸದಸ್ಯರೊಂದಿಗೆ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಬಿಜೆಪಿ ಸದಸ್ಯರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪರಿಶ್ರಮದಿಂದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಆದರೆ ಯತ್ನಾಳ ಹಾಗೂ ಯಡಿಯೂರಪ್ಪ ಅವರ ಮಧ್ಯದ ಸಂಘರ್ಷದಿಂದ ಪಕ್ಷದ ಸದಸ್ಯರಿಗೆ ಸಮಸ್ಯೆಯಾಗುತ್ತಿದೆ. ಈ ಸಂಘರ್ಷ ಬೇಗ ಕೊನೆಗಾಣಿಸಲು ಮುಂದಾಗಿ ಎಂದು ಆಗ್ರಹಿಸಿದರು.

ಇಬ್ಬರ ರಾಜಕೀಯ ವೈಮನಸ್ಸು ನಮಗೆ ತೊಡಕಾಗುತ್ತಿದೆ. ಈ ವೈಮನಸ್ಸು ಬೇಗ ಬಗೆಹರಿಸಿ ಎಂದು ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ್ ಸೇರಿದಂತೆ ಇತರೆ ಸದಸ್ಯರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಈ ಬಗ್ಗೆ ಕೇಂದ್ರದ ವರಿಷ್ಠರು ನಿರ್ಧರಿಸುತ್ತಾರೆ ಎಂದಿದ್ದಾರೆ.

ಜನವರಿ 9 ರಂದು ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

Advertisement

35 ಸದಸ್ಯ ಬಲದ ಪಾಲಿಕೆಯಲ್ಲಿ 17 ಸದಸ್ಯರು ಬಿಜೆಪಿ ಪಕ್ಷದವರಿದ್ದು, ಜೆಡಿಎಸ್ ಓರ್ವ ಸದಸ್ಯ ಬೆಂಬಲಿಸಿದರೆ ಪಕ್ಷೇತರರ ಸಹಕಾರದಿಂದ ಪಾಲಿಕೆ ಚುಕ್ಕಾಣಿ ಹಿಡಿಯಲು ಸಾಧ್ಯವಿದೆ. ಬಿಜೆಪಿ ಪಕ್ಷಕ್ಕೆ ಬೆಂಬಲಿಸುವಂತೆ ಜೆಡಿಎಸ್ ವರಿಷ್ಠ ಕುಮಾರಸ್ವಾಮಿ ಅವರಿಂದ ನಿರ್ದೇಶನ ಕೊಡಿಸಬೇಕು. ಇದರಿಂದ ಪಕ್ಷೇತರರ ಸದಸ್ಯರು ಬೆಂಬಲದೊಂದಿಗೆ ಮೇಯರ್ ಸ್ಥಾನ ಪಡೆಯಲು ಸಾಧ್ಯವಿದೆ ಎಂದು ವಿವರಿಸಿದ್ದಾರೆ.

ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಬಿಜೆಪಿ ಪಕ್ಷದಲ್ಲಿ ಸದಸ್ಯರೆ ಇಲ್ಲ. ಹೀಗಾಗಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಮೇಯರ್ ಸ್ಥಾನವನ್ನು ಪಡೆಯಲು ಅವಕಾಶವಿದ್ದು, ವರಿಷ್ಠರು ಈ ಬಗ್ಗೆ ಗಂಭೀರವಾಗಿ ಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಕ್ಷದ ಪಾಲಿಕೆ ಸದಸ್ಯರ ಭಾವನೆ ಆಲಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಜಯಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಸೂಕ್ತ ನಿರ್ಧಾರದ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next