ವಿಜಯಪುರ: ಹಾಡುಹಗಲೇ ನಡು ರಸ್ತೆಯಲ್ಲಿ ಯುವತಿಯ ಕೊಲೆಯಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಸಂಸದ, ಬಿಜೆಪಿ ವಿಜಯಪುರ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಕಿಡಿ ಕಾರಿದರು.
ಶುಕ್ರವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಕಾರ್ಪೊರೇಟರ್ ಮಗಳ ಹತ್ಯೆ ವೈಯಕ್ತಿಕ ದ್ವೇಷದಿಂದ ಆಗಿರುವುದು ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಈ ಹತ್ಯೆ ಖಂಡನಾರ್ಹ ಎಂದರು.
ಮೋದಿ ಪರ ಘೋಷಣೆ ಕೂಗುವವರು ಅಪ್ಪನಿಗೆ ಹುಟ್ಟಿದವರಲ್ಲ ಎಂದಿರುವ ಮಹೇಶ್ಚಂದ್ರ ಹೇಳಿಕೆ ಕೆಳಮಟ್ಟದಿಂದ ಕೂಡಿದೆ. ಮೋದಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದವರ ಕಪಾಳಕ್ಕೆ ಹೊಡೆಯಿರಿ ಎಂದು ನಾವೂ ಹೇಳಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಸಂಸತ ಅಧಿವೇಶದಲ್ಲಿ ಪ್ರಶ್ನೆ ಕೇಳಿಲ್ಲ ಎಂಬ ಕಾರಣಕ್ಕಾಗಿ ನನ್ನನ್ನು ಟಿಎ-ಡಿಎ ಸಂಸದ ಎಂದಿರುವ ಸಚಿವ ಎಂ.ಬಿ.ಪಾಟೀಲ ತಲೆ ಕೆಟ್ಟಿದೆ ಎಂದು ಹರಿಹಾಯ್ದರು.
ಅವನ ತಲೆ ಕೆಟ್ಟಿದೆ, ಸೋಲುತ್ತೇವೆ ಎಂಬುದು ನೂರಕ್ಕೆ ನೂರು ಗ್ಯಾರಂಟಿ ಆಗಿರುವುದರಿಂದ ಹೀಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪಕ್ಷದ ಮಾಜಿ ಶಾಸಕರು, ಮಹಿಳಾ ಘಟಕದವರು, ಹಿರಿಯರೊಂದಿಗೆ ಬಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಿದ್ದೇನೆ. ರಾಹು ಕಾಲ ಇದ್ದ ಕಾರಣ ಮಧ್ಯಾಹ್ನ 12 ನಂತರ ಬಂದು ನಾಮಪತ್ರ ಸಲ್ಲಿಸಿದ್ದೇನೆ ಎಂದರು.