ವಿಜಯಪುರ: ಕಡಬಗೆರೆ ಶ್ರೀನಿವಾಸ್ ಮೇಲೆ ಇತ್ತೀಚೆಗೆ ನಡೆದಿದ್ದ ಗುಂಡಿನ ದಾಳಿಗೆ ದೇಸಿ ಪಿಸ್ತೂಲ್ ಪೂರೈಕೆ ಮಾಡಿದ ಆರೋಪದಲ್ಲಿ ವಿಜಯಪುರ ಜೈಲಿನಲ್ಲಿದ್ದ ಇಬ್ಬರು ವಿಚಾರಾಣಾಧೀನ ಕೈದಿಗಳನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಕಡಬಗೆರೆ ಶ್ರೀನಿವಾಸ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ರುವ ಆರೋಪಿಗಳು ತಮಗೆ ವಿಜಯಪುರ ಜಿಲ್ಲೆಯಿಂದ ಶಸ್ತ್ರಾಸ್ತ್ರ ಪೂರೈಕೆಯಾಗಿದ್ದಾಗಿ ವಿಚಾರಣೆ ವಾಳೆ ಮಾಹಿತಿ ನೀಡಿದ್ದರು.
ಹೀಗಾಗಿ, ವಿಜಯಪುರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ಅಬ್ಟಾಸ್ ಅಲಿ ಹಾಗೂ ಇಜಾಜ್ ಅಹ್ಮದ್ ಪಟೇಲ್ ಎಂಬುವರನ್ನು ಬೆಂಗಳೂರು ಪೊಲೀಸರು ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಹಾಗೂ ಕೋಕಾ ಕಾಯ್ದೆಯಡಿ ತಮ್ಮ ವಶಕ್ಕೆ ಪಡೆಯಲು ಫೆ.23ರಂದು ಬಾಡಿ ವಾರಂಟ್ ಹೊರಡಿಸಿದ್ದರು. ಸೋಮವಾರ ನಗರಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ರಕ್ಷಣೆ ಹಾಗೂ ಗೌಪ್ಯತೆ ಕಾರಣ ಮಾಹಿತಿ ನೀಡಲು ಜೈಲು ಅಧೀಕ್ಷಕರು ನಿರಾಕರಿಸಿದ್ದಾರೆ.
ಭೀಮಾತೀರದ ನಂಟು: ಲಭ್ಯ ಮಾಹಿತಿ ಪ್ರಕಾರ, ಅಬ್ಟಾಸ್ ಅಲಿ ಭೀಮಾತೀರದ ಇಂಡಿ ತಾಲೂಕಿನ ಹಲಸಂಗಿ ಗ್ರಾಮದವನು. 2008ರಿಂದ 2017ರವರೆಗೆ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಆರೋಪದ ಮೇಲೆ 8 ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ವಿಜಯಪುರ ಜಿಲ್ಲೆಯ ಸಿಂಧಗಿ, ಇಂಡಿ ಹಾಗೂ ಝಳಕಿ, ಮಹಾರಾಷ್ಟ್ರದ ಸೊಲ್ಲಾಪುರ, ಶಿವಮೊಗ್ಗದ ವಿನೋಬ ನಗರ ಹಾಗೂ ಬೆಂಗಳೂರಿನ ಯಲಹಂಕ ಠಾಣೆಯಲ್ಲಿ ಈತನ ಮೇಲೆ ಪ್ರಕರಣಗಳಿವೆ. ಮತ್ತೂಬ್ಬ ಆರೋಪಿ ಇಜಾಜ್ ಅಹ್ಮದ್ ಪಟೇಲ್ ಇಂಡಿ ತಾಲೂಕಿನ ನಂದ್ರಾಳ ಗ್ರಾಮದವನು. ಮಹಾರಾಷ್ಟ್ರದ ಸೊಲ್ಲಾಪುರ, ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಝಳಕಿ, ಶಿವಮೊಗ್ಗದ ವಿನೋಬ ನಗರ ಹಾಗೂ ಬೆಂಗಳೂರಿನ ಯಲಹಂಕ ಠಾಣೆಗಳಲ್ಲಿ ಪ್ರಕರಣಗಳಿವೆ.
ಗನ್ ಸರಬರಾಜು ಬಗ್ಗೆ ವಿಚಾರಣೆ: ಶಿವಮೊಗ್ಗದಲ್ಲಿ ಅಡಿಕೆ ವ್ಯಾಪಾರಿಯೊಬ್ಬರ ಹತ್ಯೆಗೆ ಭೂಗತ ಲೋಕದ ಬನ್ನಂಜೆ ರಾಜಾನ ಆಣತಿಯಂತೆ ಸುಪಾರಿ ಹತ್ಯೆಗೆ ಸಂಚು ರೂಪಿಸಿದಾಗ 2014ರಲ್ಲಿ ಶಿವಮೊಗ್ಗದಲ್ಲಿ ಅಬ್ಟಾಸ್ ಅಲಿ ಹಾಗೂ ಇಜಾಜ್ ಅಹ್ಮದ್ ಪಟೇಲ್ ಬಂತರಾಗಿದ್ದರು. ಇದೀಗ ವಿಜಯಪುರ ಪೊಲೀಸರ ವಶಕ್ಕೆ ಸಿಕ್ಕು, ಕೆಲ ತಿಂಗಳಿಂದ ವಿಜಯಪುರ ಜೈಲಿನಲ್ಲಿದ್ದರು. ಇಷ್ಟು ವರ್ಷಗಳಲ್ಲಿ ಯಾರಿಗೆ, ಎಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಬೆಂಗಳೂರು ಪೊಲೀಸರ ವಿಚಾರಣೆಯಿಂದ ಹೊರಬರುವ ಸಾಧ್ಯತೆ ಇದೆ.