Advertisement
ಇಂಡಿ ತಾಲೂಕಿನ ಹಲ್ಲಳ್ಳಿ ಇವರ ಊರು. ಎರಡು ಕುಟುಂಬಗಳಲ್ಲಿ ಗಂಡಸರು, ಮಹಿಳೆ ಯರು, ನಾಲ್ವರು ಮಕ್ಕಳ ಸಹಿತ ಒಟ್ಟು 13 ಮಂದಿ ಇದ್ದಾರೆ. ಜಾತ್ರೆ-ಉತ್ಸವಗಳಲ್ಲಿ ರಾಟೆ ತೊಟ್ಟಿಲು, ಡ್ರ್ಯಾಗನ್ ರೈಲು ಅಳವಡಿಸಿ ಮನೋರಂಜನೆ ನೀಡುವುದು ಇವರ ಆದಾಯ ಮೂಲ. ಲಾಕ್‌ಡೌನ್ ಆರಂಭವಾದ ದಿನದಿಂದ ಇಂದಿನ ವರೆಗೆ ಪಡುಪೆರಾರದಲ್ಲಿ ಉಳಿದುಕೊಂಡು ಸಂಕಷ್ಟ ಅನುಭವಿಸುತ್ತಿದ್ದಾರೆ.
ಇವರು ಮಾರ್ಚ್ ಕೊನೆಗೆ ಪೆರಾರ ಜಾತ್ರೆಗೆ ಬಂದಿದ್ದರು. ಆಟದ ಸಾಮಗ್ರಿ ಅಳವಡಿಸಿ ಒಂದು ದಿನದ ಆಟವೂ ನಡೆದಿತ್ತು. ಅಷ್ಟರಲ್ಲಿ ಲಾಕ್‌ಡೌನ್ ಜಾರಿಯಾಯಿತು. ಲಾಕ್‌ಡೌನ್ ಸಮಯ ಒಂದು ತಿಂಗಳ ಕಾಲ ಪೆರಾರ ದೈವ-ದೇವಸ್ಥಾನದ ಆಡಳಿತ ಮಂಡಳಿ ಮತ್ತು ಪಡುಪೆರಾರ ಗ್ರಾ.ಪಂ. ಇವರ ಊಟೋಪಹಾರ ನೋಡಿಕೊಂಡು ರಕ್ಷಿಸಿವೆ. ಊರಿನ ಜನರು, ದಾನಿಗಳು, ಪೊಲೀಸರು ಕೂಡ ಸಹಾಯಹಸ್ತ ಚಾಚಿದ್ದಾರೆ.
Related Articles
ಅಂದಿನಿಂದ ಇಂದಿನವರೆಗೆ ಇವರು ಪಡು ಪೆರಾರ ಗ್ರಾ.ಪಂ. ಎದುರಿನ ಮೈದಾನದಲ್ಲಿ ಡೇರೆ ಹಾಕಿ ಬೀಡುಬಿಟ್ಟಿದ್ದಾರೆ. ಊರಿಗೆ ಹೋಗುವುದಕ್ಕಾಗಿ ಸಾಮಗ್ರಿಗಳನ್ನು ಕಟ್ಟಿ ಸಿದ್ಧವಾಗಿದ್ದಾರೆ. ಮಳೆಯಲ್ಲಿ ಡ್ರಾಗನ್ ರೈಲು, ರಾಟೆ ತೊಟ್ಟಿಲುಗಳಿಗೆ ತುಕ್ಕು ಹಿಡಿಯಲು ಆರಂಭವಾಗಿದೆ. ಕೆಲವಕ್ಕೆ ಎಣ್ಣೆ ಸವರಿ ಕಾಪಾಡಿಕೊಂಡಿದ್ದಾರೆ. “3 ಲಾರಿ ಲೋಡುಗಳಷ್ಟು ಸರಂಜಾಮುಗಳಿವೆ, ಒಂದು ಲಾರಿಗೆ 30 ಸಾವಿರ ರೂ. ಬಾಡಿಗೆ ಹೇಳುತ್ತಿದ್ದು, ಒಟ್ಟು 90 ಸಾವಿರ ರೂ. ಬೇಕು. ಇದರಿಂದಾಗಿ ಊರಿಗೂ ಹೋಗದ ಸ್ಥಿತಿಯಲ್ಲಿದ್ದೇವೆ’ ಎಂದು ಸಂತ್ರಸ್ತರಲ್ಲೊಬ್ಬರಾದ ಅಕ್ಕು ಬಾೖ ಹೇಳಿದ್ದಾರೆ.
Advertisement
ಮತ್ತೆ ಹಳಿಯೇರೀತೇ ಬದುಕಿನ ಬಂಡಿ? ಎಲ್ಲವೂ ಸರಿಯಾಗಿದ್ದರೆ ಪೆರಾರದ ಜಾತ್ರೆ ಮುಗಿಸಿ ಪೊಳಲಿ ಜಾತ್ರೆಗೆ ಹೊರಡುವ ಯೋಜನೆಯನ್ನು ಈ ತಂಡ ಹಾಕಿಕೊಂಡಿತ್ತು. ಅಷ್ಟರಲ್ಲಿ ಆರಂಭವಾದ ಲಾಕ್‌ಡೌನ್ ಬದುಕಿನ ಬಂಡಿಯ ಹಳಿ ತಪ್ಪಿಸಿತು. ಇನ್ನು ಕೆಲವೇ ತಿಂಗಳುಗಳಲ್ಲಿ ಕಾಲಚಕ್ರ ಒಂದು ಸುತ್ತು ಪೂರೈಸುತ್ತದೆ. ಅದಕ್ಕೆ ಮುನ್ನ ಈ ಮಂದಿ ಊರಿಗೆ ಹೋಗುತ್ತಾರೆಯೇ ಅಥವಾ ಮತ್ತೆ ಜಾತ್ರೆ-ಉತ್ಸವಗಳು ಆರಂಭವಾಗಿ ಇವರ ಬದುಕು ಕೂಡ ಹಳಿಯೇರುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕು. ಅಲ್ಲಿ ಇಲ್ಲಿ ಕೂಲಿ ಕೆಲಸ ಹುಡುಕಿಕೊಂಡು ತತ್ಕಾಲಕ್ಕೆ ಆದಾಯ ಕಂಡುಕೊಂಡಿದ್ದೇವೆ. ಸಾಲ ಮಾಡಿ ಈ ಸೊತ್ತುಗಳನ್ನು ಖರೀದಿಸಿದ್ದೇವೆ. ಜಾತ್ರೆ, ಸಮಾರಂಭ ಇದ್ದರೆ ಸಾಲ ತೀರಿಸಬಹುದಿತ್ತು. ಈಗ ಹೊಟ್ಟೆ ಹೊರೆಯುವುದಕ್ಕೂ ಹಣ ಇಲ್ಲ .
– ಅಕ್ಕು ಬಾೖ, ಸಂತ್ರಸ್ತ ಕುಟುಂಬದ ಮಹಿಳೆ ಈ ಊರಿನವರು ಒಳ್ಳೆಯವರು, ಇಷ್ಟು ದಿನ ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ.
– ಸಕ್ಕು ಬಾೖ, ಸಂತ್ರಸ್ತ ಕುಟುಂಬಗಳ ಹಿರಿಯ ಸದಸ್ಯೆ