ವಿಜಯಪುರ : ಏಳು ವರ್ಷಗಳ ಹಿಂದೆ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅತಾಚಾರಿಗೆ ಜಿಲ್ಲೆಯ 4ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 1.15 ಲಕ್ಷ ರೂ. ದಂಡ ವಿಧಿಸಿ ಶುಕ್ರವಾರ ಆದೇಶ ಹೊರಡಿಸಿದೆ.
2015 ಫೆಬ್ರವರಿ 4 ರಂದು ನಗರದ ರೈಲ್ವೇ ಸ್ಟೇಷನ್ ಮೇಲ್ಸೇತುವೆ ಮೇಲೆ ನಡೆದು ಹೋಗುತ್ತಿದ್ದ ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಬಂದ ಜುಮನಾಳ ಗ್ರಾಮದ ಅಶೋಕ ನಾಯ್ಕೋಡಿ ಜೀವಬೆದರಿಕೆ ಹಾಕಿ, ಕರೆದೊಯ್ದಿದ್ದ. ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮೀರಾಸಾ ಲಸಕ್ರಿ ಎನ್ನುವವರ ಜಮೀನಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ.
ಈ ಕುರಿತು ಮನಗೂಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖಾಧಿಕಾರಿ ನ್ಯಾಯಾಲಯಕ್ಕೆ ದೋಷಾರೋಪ ವರದಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಾಲ್ಕನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಭಾಸ ಬಂಡು ಹೊಸಕಲ್ಲೆ ಅವರು, ವಿಚಾರಣೆ ನಡೆಸಿ, ಅಶೋಕ ಅತ್ಯಾಚಾರ ಎಸಗಿದ್ದು ದೃಢಪಟ್ಟ ಕಾರಣ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಐಪಿಸಿ 376 ಅಪರಾಧಕ್ಕೆ 10 ವರ್ಷ ಕಠಿಣ ಜೈಲು ಶಿಕ್ಷೆ ಸಹಿತ 1 ಲಕ್ಷ ರೂ. ದಂಡ, ಐಪಿಸಿ366 ಅಪರಾಧಕ್ಕೆ 4 ವರ್ಷ ಕಠಿಣ ಶಿಕ್ಷೆ ಸಹಿತ 10 ಸಾವಿರ ರೂ. ದಂಡ , 3 ವರ್ಷ ಕಠಿಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ನಾಲ್ಕನೇ ಅಧಿಕ ಸರ್ಕಾರಿ ಅಭಿಯೋಜಕರಾದ ವಿ.ಜಿ.ಮಾಮನಿ ವಾದ ಮಂಡಿಸಿದ್ದರು.