Advertisement

ಕಾಂಗ್ರೆಸಿಗರ ಗೂಂಡಾಗಿರಿ ಸಂಸ್ಕೃತಿ ವಿರೋಧಿಸಿದ್ದ ವಿಜಯಕುಮಾರ್‌

12:22 PM May 15, 2018 | |

ಬೆಂಗಳೂರು: ಚುನಾಯಿತ ಜನಪ್ರತಿನಿಧಿಗಳಿಗೆ ಸದಾ ಕಾಲ ಮಾದರಿ ಆಗಿರುವ ದಿವಂಗತ ಶಾಸಕ ಬಿ.ಎನ್‌.ವಿಜಯಕುಮಾರ್‌ ತಮ್ಮ ಸಾರ್ವಜನಿಕ ಬದುಕಿನುದ್ದಕ್ಕೂ ಕಾಂಗ್ರೆಸ್‌ ದುರಾಡಳಿತ ಮತ್ತು ಗೂಂಡಾ ಸಂಸ್ಕೃತಿಯನ್ನು ವಿರೋಧಿಸಿದ್ದರು ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದರು.

Advertisement

ಬಿಜೆಪಿ ನಗರ ಘಟಕದ ವತಿಯಿಂದ ಸೋಮವಾರ ಬಸವನಗುಡಿಯ ಮರಾಠ ಹಾಸ್ಟೆಲ್‌ ಆವರಣದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ವಿಜಯಕುಮಾರ್‌ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆಗಳ ಮೊದಲು, ಚುನಾವಣೆ ವೇಳೆ ಮತ್ತು ಚುನಾವಣೆ ನಂತರ ಜಾತಿ ಮತ್ತು ಸಮಾಜವನ್ನು ಒಡೆಯುವುದು, ಜಾತಿ ರಾಜಕಾರಣ ಮಾಡುವುದು,

ದುಡ್ಡಿನ ಹೊಳೆ ಹರಿಸುವುದು, ಚುನಾವಣಾ ಅಕ್ರಮಗಳನ್ನು ಮಾಡುವುದು ಮತ್ತು ಗೂಂಡಾಗಿರಿ ನಡೆಸುವುದು ಕಾಂಗ್ರೆಸ್‌ ಪಕ್ಷದ ಸಂಸ್ಕೃತಿ. ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಓಟರ್‌ ಐಡಿ ಪತ್ತೆ ಪ್ರಕರಣ, ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ವೇದವ್ಯಾಸ್‌ ಭಟ್‌ ಮೇಲೆ ನಡೆದ ಹಲ್ಲೆ ಇದಕ್ಕೆ ಸಾಕ್ಷಿ. ಕಾಂಗ್ರೆಸ್‌ ಪಕ್ಷದ ಈ “ಸಂಸ್ಕೃತಿ’ಯನ್ನು ವಿಜಯಕುಮಾರ್‌ ವಿರೋಧಿಸುತ್ತಲೇ ಬಂದಿದ್ದರು ಎಂದರು.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಕುಮಾರ್‌ ಅವರಿಗೆ ಕೊಡಬಾರದ ಕಷ್ಟ ಕೊಡಲು ಗೂಂಡಾ ಶಕ್ತಿಗಳನ್ನು ಬಿಡಲಾಗಿತ್ತು. ಅದರಿಂದ ಅವರ ಮೇಲೆ ಸಾಕಷ್ಟು ಒತ್ತಡ ಉಂಟಾಗಿತ್ತು. ಎರಡು ಬಾರಿ ಶಾಸಕರಾಗಿ ಆಯ್ಕೆಯಾದ ನಂತರವೂ ವಿಜಯಕುಮಾರ್‌ ಅವರು ತಮ್ಮ ಜೀವನ ಶೈಲಿ ಮತ್ತು ಜೀವನ ಮಟ್ಟ ಬದಲಾಯಿಸಿಕೊಂಡಿಲ್ಲ. ಬ್ಯಾಂಕ್‌ ಬ್ಯಾಲೆನ್ಸ್‌, ಸೈಟು, ಕಾರು, ಸ್ವಂತ ಮನೆ ಅವರಿಗೆ ಇರಲಿಲ್ಲ.

ಈಗಿನ ಜನಪ್ರತಿನಿಧಿಗಳನ್ನು ತುಲನೆ ಮಾಡಿ ನೋಡಿದರೆ, ವಿಜಯಕುಮಾರ್‌ ಸದಾ ಕಾಲದ ಮಾದರಿ. ಪ್ರಧಾನಿ ಮೋದಿಯವರ ಇಚ್ಛೆ ಹಾಗೂ ಅಮಿತ್‌ ಷಾ ಅವರ ಆದೇಶದಂತೆ ಪಕ್ಷದ ಚುನಾಯಿತ ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರ ತರಬೇತಿಗೆ “ಬಿ.ಎನ್‌. ವಿಜಯಕುಮಾರ್‌ ಸ್ಮಾರಕ ತರಬೇತಿ ಸಂಸ್ಥೆ’ಯನ್ನು ಶೀಘ್ರದಲ್ಲೇ ಹುಟ್ಟು ಹಾಕಲಾಗುವುದು ಎಂದು ಹೇಳಿದರು.

Advertisement

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಚುನಾವಣೆಗೆ ಸಂಬಂಧಿಸಿದ ಪಕ್ಷದ ಕಚೇರಿಯಲ್ಲಿ ಇತ್ತಿಚಿಗೆ ನಡೆದ ಸಭೆಯೊಂದರಲ್ಲಿ ಸಿಕ್ಕಾಗ “ಏನ್‌ ವಿಜಯಕುಮಾರ್‌ ಈ ಬಾರಿ ಹೇಗೆ ಚುನವಾಣೆ’ ಎಂದು ಕೇಳಿದ್ದೆ. “ಬಹಳ ಕಷ್ಟ. ಸೋಟ್‌ಕೇಸ್‌ಗಳಿಲ್ಲದೇ ಚುನಾವಣೆಗೆ ಸ್ಪರ್ಧಿಸುವುದು ಕಷ್ಟ, ಗುಂಪುಗಾರಿಕೆ ಮಾಡದಿದ್ದರೆ ಪಕ್ಷದಲ್ಲಿ ಕಡೆಗಣಿಸಲಾಗುತ್ತದೆ.

ನಾಯಕರಿಗೆ ಜೈಕಾರ ಹಾಕದಿದ್ದರೆ ಪಕ್ಷದಲ್ಲಿ ಬೆಳೆಯಲು ಅವಕಾಶ ಇರುವುದಿಲ್ಲ ಅನ್ನುವುದು ಎಲ್ಲ ರಾಜಕೀಯ ಪಕ್ಷಗಳ ಸ್ಥಿತಿ ಆಗಿದೆ. ನಮ್ಮ ಪಕ್ಷ ಇದಕ್ಕೆ ಹೊರತಾಗಿತ್ತು. ಆದರೆ, ಇಂದು ಆದು ನಮ್ಮ ಪಕ್ಷದಲ್ಲೂ ಬಂದು ಬಿಟ್ಟಿದೆ. ಈಗ ನಾನು ಹೊಳೆಯ ಮಧ್ಯದಲ್ಲಿ ಇದ್ದೇನೆ. ಯಾವುದಾದರೂ ಒಂದು ಕಡೆ ದಡ ಸೇರಲೇಬೇಕು. ಅದಕ್ಕಾಗಿ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ವಿಜಯಕುಮಾರ್‌ ಹೇಳಿದ್ದರು,’ ಎಂದು ಸ್ಮರಿಸಿಕೊಂಡರು.

ಆರೆಸ್ಸೆಸ್‌ ಹಿರಿಯ ಮುಖಂಡ ವಿ.ನಾಗರಾಜ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ.ಸಿ. ಮೋಹನ್‌, ಮಾಜಿ ಉಪ ಮುಖ್ಯಮಂತ್ರಿ ಆರ್‌. ಅಶೋಕ್‌, ವಿಧಾನ ಪರಿಷತ್‌ ಸದಸ್ಯ ರಾಮಚಂದ್ರೇಗೌಡ, ಸಮೀರ್‌ ಸಿಂಹ ನುಡಿನಮನ ಸಲ್ಲಿಸಿದರು. ಶಾಸಕರಾದ ಸತೀಶ್‌ ರೆಡ್ಡಿ, ಅರವಿಂದ ಬೆಲ್ಲದ, ಬೆಂಗಳೂರು ನಗರ ಘಟದ ಅಧ್ಯಕ್ಷ ಪಿ.ಎನ್‌. ಸದಾಶಿವ  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next