ಲಂಡನ್ : ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲವನ್ನು ಸುಸ್ತಿ ಇರಿಸಿ ಲಂಡನ್‌ಗೆ ಪಲಾಯನಗೈದು ಅಲ್ಲೀಗ ಭಾರತಕ್ಕೆ ಗಡೀಪಾರಾಗುವ ವಿಚಾರಣೆಯನ್ನು ಎದುರಿಸುತ್ತಿರುವ ಮಧ್ಯ ದೊರೆ ವಿಜಯ್ ಮಲ್ಯ ಅವರಿಗೆ ಸಾಲ ವಸೂಲಾತಿ ಸಂಬಂಧಿ ಕಾನೂನು ಹೋರಾಟಕ್ಕಾಗಿ ಹಣ ಖರ್ಚು ಮಾಡಿರುವ ಭಾರತೀಯ ಬ್ಯಾಂಕುಗಳಿಗೆ 2 ಲಕ್ಷ ಪೌಂಡ್ ಪಾವತಿಸುವಂತೆ ಬ್ರಿಟನ್‌ನ ಹೈಕೋರ್ಟ್ ಆದೇಶಿಸಿದೆ.
ಕಳೆದ ತಿಂಗಳಲ್ಲಿ ನ್ಯಾಯಾಧೀಶ ಆ್ಯಂಡ್ರೂé ಹೆನ್‌ಶಾ ಅವರು ಮಲ್ಯ ಅವರ ಜಾಗತಿಕ ಆಸ್ತಿಪಾಸ್ತಿಗಳನ್ನು ಸ್ತಂಭನಗೊಳಿಸುವ ಆದೇಶವನ್ನು ನೀಡಲು ನಿರಾಕರಿಸಿದ್ದರು. ಆದರೆ ಅದೇ ವೇಳೆ ಎಸ್‌ಬಿಐ ನೇತೃತ್ವದ 13 ಬ್ಯಾಂಕುಗಳ ಕೂಟಕ್ಕೆ ಮಲ್ಯ ಅವರಿಂದ ಬಾಕಿ ಇರುವ 1.145ಬಿಲಿಯ ಪೌಂಡ್‌ಗಳನ್ನು ವಸೂಲು ಮಾಡುವ ಹಕ್ಕಿದೆ ಎಂದು ಎಂಬ ಭಾರತೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದ್ದರು.
ತೀರ್ಪಿನ ಭಾಗವಾಗಿ ನ್ಯಾಯಾಲಯವು, ಕರ್ನಾಟಕದ ಡೆಟ್ ರಿಕವರಿ ಟ್ರಿಬ್ಯುನಲ್‌ನ ತೀರ್ಪು ಮತ್ತು ಜಾಗತಿಕ ಆಸ್ತಿ ಪಾಸ್ತಿ ಸ್ತಂಭನದ ಆದೇಶದ ನೋಂದಾವಣೆ ವೆಚ್ಚವನ್ನು ಪಾವತಿಸುವಂತೆಯೂ 62ರ ಹರೆಯದ ಮಲ್ಯ ಅವರಿಗೆ ಆದೇಶಿಸಿದೆ.
ಬ್ರಿಟನ್ ಹೈಕೋಟ್‌ರ ನ್ಯಾಯಾಧೀಶ ಹೆನ್‌ಶಾ ಅವರು ಕಳೆದ ಮೇ 8ರಂದು ಈ ತೀರ್ಪು ನೀಡಿದ್ದರು.
ಮಲ್ಯ ಅವರು ಇದೀಗ ಪುನಃ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟರ ಕೋರ್ಟಿಗೆ ಹೋಗಬೇಕಿದ್ದು ಅಲ್ಲಿ ತಮ್ಮ ಗಡೀಪಾರಿನ ಅಂತಿಮ ವಿಚಾರಣೆಯನ್ನು ಎದುರಿಸಬೇಕಿದೆ.