ಚೆನ್ನೈ: ಇತ್ತೀಚೆಗಿನ ವರ್ಷದಲ್ಲಿ ಯಾವುದೇ ಬಹು ನಿರೀಕ್ಷಿತ ಸಿನಿಮಾಗಳು ರಿಲೀಸ್ ಆದರೆ ಕೆಲವೇ ಗಂಟೆಗಳಲ್ಲಿ ಚಿತ್ರದ ಬಗ್ಗೆ ಹತ್ತಾರು ಯೂಟ್ಯೂಬ್ ಚಾನೆಲ್‌ಗಳಲ್ಲಿ ಆ ಚಿತ್ರದ ಬಗ್ಗೆ ವಿಮರ್ಶೆಗಳು ಬರುತ್ತವೆ. ಎಷ್ಟೋ ಸಲಿ ಈ ರಿವ್ಯೂಗಳನ್ನೇ ನೋಡಿ ಪ್ರೇಕ್ಷಕರು ಥಿಯೇಟರ್‌ಗೆ ಹೋಗಬೇಕೋ, ಬೇಡ್ವೋ ಎನ್ನುವುದನ್ನು ನಿರ್ಧಾರ ಮಾಡುತ್ತಾರೆ.
ತಮಿಳು ಚಲನಚಿತ್ರ ಸಕ್ರಿಯ ನಿರ್ಮಾಪಕರ ಸಂಘ (TFAPA) ಥಿಯೇಟರ್ ಮಾಲೀಕರಿಗೆ ಸುದೀರ್ಘ ಪತ್ರವೊಂದನ್ನು ಬರೆದು ಯೂಟ್ಯೂಬ್ ವಿಮರ್ಶಕರಿಗೆ ಥಿಯೇಟರ್ ಆವರಣಕ್ಕೆ ಪ್ರವೇಶ ನೀಡಬಾರದೆಂದು ಆಗ್ರಹಿಸಿದೆ.
ಇತ್ತೀಚೆಗೆ ಸೂರ್ಯ ಅವರ ʼಕಂಗುವʼ ಸಿನಿಮಾ ರಿಲೀಸ್ ಆಗಿದೆ. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲೇ ನಿರ್ಮಾಪಕರ ಸಂಘ ಪತ್ರವನ್ನು ಬರೆದಿದೆ.
ಪತ್ರದಲ್ಲಿ ಏನಿದೆ?: ಇತ್ತೀಚೆಗೆ ತೆರೆಕಂಡ ʼಕಂಗುವʼ, ʼಇಂಡಿಯನ್ -2ʼ ಹಾಗೂ ‘ವೆಟ್ಟೈಯಾನ್’ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಯೂಟ್ಯೂಬ್ ವಿಮರ್ಶಕಾರ ನೆಗಟಿವ್ ಅಭಿಪ್ರಾಯಗಳು ಪರಿಣಾಮ ಬೀರಿದೆ. ನಾವು ಪತ್ರಕರ್ತರಿಗೆ ಚಲನಚಿತ್ರಗಳನ್ನು ವಿಮರ್ಶಿಸಲು ಅಡ್ಡಿ ಆಗಲ್ಲ. ಆದರೆ ಇದು ಸಾರ್ವಜನಿಕ ವೇದಿಕೆಗಳಲ್ಲಿ ದ್ವೇಷವನ್ನು ಹರಡುವಂತಿರಬಾರದು. ಸಿನಿಮಾದ ಕಂಟೆಂಟ್ ಟೀಕಿಸಿ ಆದರೆ ನಟರ, ನಿರ್ದೇಶಕರು ಮತ್ತು ನಿರ್ಮಾಪಕರ ವೈಯಕ್ತಿಕ ಜೀವನವನ್ನು ಟೀಕಿಸುವುದು ಸರಿಯಿಲ್ಲ. ಸಿನಿಮಾ ರಿಲೀಸ್ ಆದ ಫಸ್ಟ್ ಡೇ, ಫಸ್ಟ್ ಶೋ ಬಳಿಕ ಸಿನಿಮಾಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ರಿವ್ಯೂಗಳನ್ನು ನೀಡಲು ಯೂಟ್ಯೂಬರ್ ಗಳಿಗೆ ಅವಕಾಶ ನೀಡಬಾರದೆಂದು ಥಿಯೇಟರ್ ಮಾಲೀಕರಿಗೆ ನಿರ್ಮಾಪಕರ ಸಂಘ ಪತ್ರದ ಮೂಲಕ ಒತ್ತಾಯಿಸಿದೆ.
2023ರಲ್ಲಿ ಮಲಯಾಳಂ ಚಲನಚಿತ್ರೋದ್ಯಮವು ಯೂಟ್ಯೂಬ್ ವಿಮರ್ಶಕರನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಿತ್ತು. ಆ ಬಳಿಕ ಕೇರಳ ಹೈಕೋರ್ಟ್ ಚಲನಚಿತ್ರ ಬಿಡುಗಡೆಯಾದ ಮೊದಲ ಏಳು ದಿನಗಳ ಬಳಿಕವಷ್ಟೇ ಯೂಟ್ಯೂಬ್ನಲ್ಲಿ ವಿಮರ್ಶೆ ಹಾಕಬೇಕೆಂದು ಆದೇಶ ನೀಡಿತ್ತು.