ರಾಜ್‌ಕೋಟ್: ರಾಜಸ್ಥಾನವನ್ನು 30 ರನ್ನುಗಳಿಂದ ಮಣಿಸಿದ ಹರ್ಯಾಣ 2023ನೇ ಸಾಲಿನ “ವಿಜಯ್ ಹಜಾರೆ ಟ್ರೋಫಿ” ಏಕದಿನ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಶನಿವಾರದ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಹರ್ಯಾಣ 8 ವಿಕೆಟಿಗೆ 287 ರನ್ ಪೇರಿಸಿದರೆ, ರಾಜಸ್ಥಾನ 48 ಓವರ್‌ಗಳಲ್ಲಿ 257ಕ್ಕೆ ಆಲೌಟ್ ಆಯಿತು.
ಹರ್ಯಾಣ ಪರ ಆರಂಭಕಾರ ಅಂಕಿತ್ ಕುಮಾರ್ ಸರ್ವಾಧಿಕ 88, ನಾಯಕ ಅಶೋಕ್ ಮೆನೇರಿಯಾ 70 ರನ್ ಬಾರಿಸಿದರು. ರಾಜಸ್ಥಾನದ ಅನಿಕೇತ್ ಚೌಧರಿ 4 ವಿಕೆಟ್ ಕೆಡವಿದರು.
ರಾಜಸ್ಥಾನದ ಚೇಸಿಂಗ್ ಅತ್ಯಂತ ಆಘಾತಕಾರಿಯಾಗಿತ್ತು. 12 ರನ್ ಆಗುವಷ್ಟರಲ್ಲಿ 3 ವಿಕೆಟ್ ಉರುಳಿ ಹೋಯಿತು. ಇದರಲ್ಲಿ, ಕರ್ನಾಟಕ ವಿರುದ್ಧ 180 ರನ್ ಬಾರಿಸಿ ಮಿಂಚಿದ್ದ ದೀಪಕ್ ಹೂಡಾ ವಿಕೆಟ್ ಕೂಡ ಸೇರಿತ್ತು. ಹೂಡಾ ಅವರದು ಇಲ್ಲಿ ಶೂನ್ಯ ಸಂಪಾದನೆ.
ಈ ಕುಸಿತದ ನಡುವೆಯೂ ಓಪನರ್ ಅಭಿಜಿತ್ ತೋಮರ್ 106 ರನ್ ಬಾರಿಸಿ ರಾಜಸ್ಥಾನಕ್ಕೆ ಭರವಸೆ ಮೂಡಿಸಿದರು. ಇವರಿಗೆ ಕೀಪರ್ ಕುಣಾಲ್ ಸಿಂಗ್ ರಾಥೋಡ್ (79) ಉತ್ತಮ ಬೆಂಬಲ ನೀಡಿದರು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಉಳಿದವರಿಗೆ ಹರ್ಯಾಣದ ಬೌಲಿಂಗ್ ಆಕ್ರಮಣವನ್ನು ನಿಭಾಯಿಸಿ ನಿಲ್ಲಲಾಗಲಿಲ್ಲ. ಸುಮಿತ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ 3 ವಿಕೆಟ್; ಅಂಶುಲ್ ಕಾಂಬೋಜ್ ಮತ್ತು ರಾಹುಲ್ ತೆವಾಟಿಯಾ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಹರ್ಯಾಣ-8 ವಿಕೆಟಿಗೆ 287 (ಅಂಕಿತ್ ಕುಮಾರ್ 88, ಅಶೋಕ್ ಮೆನೇರಿಯಾ 70, ನಿಶಾಂತ್ ಸಿಂಧು 29, ಅನಿಕೇತ್ ಚೌಧರಿ 49ಕ್ಕೆ 4, ಅರಾಫತ್ ಖಾನ್ 59ಕ್ಕೆ 2). ರಾಜಸ್ಥಾನ-48 ಓವರ್‌ಗಳಲ್ಲಿ 257 (ಅಭಿಜಿತ್ ತೋಮರ್ 106, ಕುಣಾಲ್ ಸಿಂಗ್ ರಾಥೋಡ್ 79, ಸುಮಿತ್ ಕುಮಾರ್ 34ಕ್ಕೆ 3, ಹರ್ಷಲ್ ಪಟೇಲ್ 47ಕ್ಕೆ 3). ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಸುಮಿತ್ ಕುಮಾರ್.