ಬೆಂಗಳೂರು: ಉದ್ಯಾನನಗರಿಯ ಆಲೂರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟದ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಲು ಕರ್ನಾಟಕ ತಂಡ ಶುಕ್ರವಾರ ಮಾಡು ಇಲ್ಲವೆ ಮಡಿ ಹೋರಾಟದಲ್ಲಿ ರೈಲ್ವೇಸ್ ತಂಡವನ್ನು ಎದುರಿಸಬೇಕಿದೆ.
ಗಾಯದ ಮೇಲೆ ಬರೆ ಎನ್ನುವಂತೆ ರಾಜ್ಯ ತಂಡದ ನಾಯಕ ವಿನಯ್ ಕುಮಾರ್ ಗಾಯಕ್ಕೆ ತುತ್ತಾಗಿ ಕೂಟದಿಂದ ಹೊರಬಿದ್ದಿದ್ದಾರೆ. ಜತೆಗೆ ಅಭಿಮನ್ಯು ಮಿಥುನ್ ಕೂಡ ತಂಡದಿಂದ ಹೊರಬಿದ್ದಿರುವುದು ತಂಡಕ್ಕೆ ಆಘಾತ ನೀಡಿದೆ. ವಿನಯ್ ಬದಲು ದೇವದತ್ ಪಡಿಕಲ್ ಹಾಗೂ ಅಭಿಮನ್ಯು ಮಿಥುನ್ ಬದಲಿಗೆ ರೋನಿತ್ ಮೋರೆ ತಂಡವನ್ನು ಕೂಡಿಕೊಂಡಿದ್ದಾರೆ.
ಗುಂಪು “ಎ’ನಿಂದ 2 ತಂಡಗಳು ಕ್ರಮವಾಗಿ ಕ್ವಾರ್ಟರ್‌ಫೈನಲ್‌ಗೆ ತೆರಳಲಿದೆ. ಬರೋಡ 16 ಅಂಕ ಪಡೆದು ಕ್ವಾರ್ಟರ್‌ಫೈನಲ್ ಬಹುತೇಕ ಖಚಿತಪಡಿಸಿಕೊಂಡಿದೆ. 2ನೇ ತಂಡ ಯಾವುದೆಂದು ನಿರ್ಧಾರವಾಗಬೇಕಿದೆ. ಸದ್ಯ 14 ಅಂಕ ಪಡೆದಿರುವ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯ ತಂಡ ಒಟ್ಟಾರೆ 5 ಪಂದ್ಯ ಆಡಿದೆ. 3 ಪಂದ್ಯದಲ್ಲಿ ಗೆದ್ದಿದೆ. 1 ಪಂದ್ಯದಲ್ಲಿ ಸೋತಿದೆ ಹಾಗೂ ಮಳೆಯಿಂದ 1 ಪಂದ್ಯ ರದ್ದಾಗಿದೆ. 12 ಅಂಕದೊಂದಿಗೆ ಪಂಜಾಬ್ 3ನೇ ಸ್ಥಾನ, 12 ಅಂಕದೊಂದಿಗೆ ರೈಲ್ವೇಸ್ 4ನೇ ಸ್ಥಾನದಲ್ಲಿದೆ. ಒಂದು ವೇಳೆ ರೈಲ್ವೇಸ್ ಗೆದ್ದರೆ ರಾಜ್ಯ ತಂಡ ಕೂಟದಿಂದ ಹೊರಬೀಳುವ ಸಾಧ್ಯತೆ ಇದೆ.
ಕರ್ನಾಟಕ ತಂಡ:
ಕರುಣ್ ನಾಯರ್ (ನಾಯಕ), ಮಾಯಾಂಕ್ ಅಗರ್ವಾಲ್, ಆರ್,ಸಮರ್ಥ್, ಪವನ್ ದೇಶಪಾಂಡೆ, ಬಿ.ಆರ್.ಶರತ್, ಕೆ,ಗೌತಮ್, ಶ್ರೇಯಸ್ ಗೋಪಾಲ್, ಪ್ರಸಿದ್ಧ್ ಕೃಷ್ಣ, ಟಿ.ಪ್ರದೀಪ್, ಅನಿರುದ್ಧ್ ಜೋಶಿ, ಜೆ.ಸುಚಿತ್, ರಿತೇಶ್ ಭಟ್ಕಳ್, ಪ್ರವೀಣ್ ದುಬೆ, ರೋನಿತ್ ಮೋರೆ, ದೇವದತ್ ಪಡಿಕಲ್