Advertisement

ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಯೋಜನೆ

09:17 PM Aug 18, 2020 | mahesh |

ಬಂಟ್ವಾಳ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭ ವಿಳಂಬವಾಗುತ್ತಿದ್ದು, ಮಕ್ಕಳ ಕಲಿಕೆ ನಿರಂತರವಾಗಿರಬೇಕು ಎಂಬ ಹಿನ್ನೆಲೆ ಯಲ್ಲಿ ಸರಕಾರ ವಿದ್ಯಾಗಮ ಜಾರಿಗೆ ತಂದಿದ್ದು, ಬಂಟ್ವಾಳ ತಾಲೂಕಿನಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಂಡು ಹಳ್ಳಿ ಹಳ್ಳಿಗಳಲ್ಲೂ ಮಕ್ಕಳ ಗುಂಪು ಕಲಿಕೆಯಲ್ಲಿ ತೊಡಗಿಕೊಂಡಿದೆ.

Advertisement

ಖಾಸಗಿ ಶಾಲೆಗಳು ಆನ್‌ಲೈನ್‌ ತರಗತಿ ಮೂಲಕ ಮಕ್ಕಳನ್ನು ಸಿದ್ಧಗೊಳಿಸುತ್ತಿದ್ದು, ಆದರೆ ಸರಕಾರಿ, ಅನುದಾನಿತ ಶಾಲೆಗಳ ಮಕ್ಕಳು ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿದ್ಯಾಗಮವನ್ನು ಅನುಷ್ಠಾನಿಸಿದೆ. ಇಲ್ಲಿ ಪಾಠ ಮಾಡುವುದಕ್ಕಿಂತಲೂ ಮುಖ್ಯವಾಗಿ ಮಕ್ಕಳ ನಿರಂತರ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ಮಕ್ಕಳನ್ನು ಸಿದ್ಧಗೊಳಿಸುವ ಕಾರ್ಯ ನಡೆಯುತ್ತಿದೆ.

ತಾಲೂಕಿನ ಎಲ್ಲ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸುಮಾರು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಿಕೊಳ್ಳಲಿದ್ದಾರೆ. ಸಂಘ-ಸಂಸ್ಥೆಗಳ ಆವರಣ, ಹಾಲಿನ ಸೊಸೈಟಿಗಳ ಆವರಣ, ಮಂದಿರಗಳ ಆವರಣ ಮೊದಲಾದ ಕಡೆಗಳಲ್ಲಿ ಸೀಮಿತ ಸಂಖ್ಯೆಯ ಮಕ್ಕಳಿಗೆ ಈ ಕಾರ್ಯಕ್ರಮವಿರುತ್ತದೆ.

ಎಂಟ್ರಿ ಬಳಿಕ ದಾಖಲಾತಿ ಸಿಗಲಿದೆ
ಕಳೆದ ಶೈಕ್ಷಣಿಕ ಸಾಲಿನಲ್ಲಿ ಒಂದರಿಂದ 10ನೇ ತರಗತಿಯವರೆಗೆ ಸುಮಾರು 59 ಸಾವಿರ ವಿದ್ಯಾರ್ಥಿಗಳಿದ್ದು, ಆದರೆ ಈ ವರ್ಷದ 1ನೇ ತರಗತಿಗೆ ದಾಖಲಾತಿ ಪೂರ್ಣಗೊಳ್ಳದೆ ಇರುವುದರಿಂದ ನಿರ್ದಿಷ್ಟ ಮಕ್ಕಳ ಸಂಖ್ಯೆ ಸಿಕ್ಕಿಲ್ಲ. ಆ. 15ರ ವರೆಗೂ ದಾಖಲಾತಿ ನಡೆದಿದ್ದು, ಆನ್‌ಲೈನ್‌ ಎಂಟ್ರಿ ಬಳಿಕ ದಾಖಲಾತಿ ಸಿಗಲಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ಮೂರು ಗುಂಪುಗಳಾಗಿ ವಿಂಗಡಣೆ
ಇಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕಲಿಕೆಯ ಮೆಟೀರಿಯಲ್ಸ್‌ಗಳನ್ನು ನೀಡಲಾಗುತ್ತಿದ್ದು, ಮೊಬೈಲ್‌ ಇಂಟರ್‌ನೆಟ್‌ ಇರುವ ವಿದ್ಯಾರ್ಥಿಗಳು, ಸಾಮಾನ್ಯ ಮೊಬೈಲ್‌ ಇರುವ ವಿದ್ಯಾರ್ಥಿಗಳು ಹಾಗೂ ಮೊಬೈಲ್‌ ಇಲ್ಲದ ವಿದ್ಯಾರ್ಥಿಗಳು ಎಂಬ ಗುಂಪುಗಳಾಗಿ ವಿಂಗಡಿಸಿ ಅದರ ಆಧಾರದಲ್ಲಿ ಕಲಿಕೆ ಸಾಮಗ್ರಿಗಳನ್ನು ಮಕ್ಕಳಿಗೆ ತಲುಪಿಸಲಾಗುತ್ತದೆ. ದತ್ತು ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡಿ ಅವರ ಮೌಲ್ಯಮಾಪನ ನಡೆಸಲಿದ್ದಾರೆ.

Advertisement

ಎಲ್ಲ ಭಾಗಗಳಲ್ಲೂ ಅನುಷ್ಠಾನ
ತಾಲೂಕಿನಲ್ಲಿ ಎಲ್ಲ ಭಾಗಗಳಲ್ಲೂ ವಿದ್ಯಾಗಮ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಎಲ್ಲ ವಿದ್ಯಾರ್ಥಿಗಳನ್ನು ತಲುಪಲಿದೆ. ನಿರ್ದಿಷ್ಟವಾಗಿ ಮಕ್ಕಳ ಗುಂಪಿಗೆ ದತ್ತು ಪಡೆದ ಶಿಕ್ಷಕಿ ಚಟುವಟಿಕೆಗಳನ್ನು ನಡೆಸಲಿದ್ದಾರೆ. ಶಿಕ್ಷಕಿರಿಗೆ ಕೋವಿಡ್‌ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡಿ ಉಳಿದಂತೆ ಎಲ್ಲ ಶಿಕ್ಷಕರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
-ಜ್ಞಾನೇಶ್‌ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next