Advertisement

ರಾಜ್ಯದ ವಿದ್ಯಾಗಮ ದೇಶವ್ಯಾಪಿ ಅನುಷ್ಠಾನ! ; ಯೋಜನೆಗೆ ಕೇಂದ್ರ ಶಿಕ್ಷಣ ಇಲಾಖೆಯಿಂದ ಮೆಚ್ಚುಗೆ

07:25 AM Sep 14, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆ ಕಾಪಾಡಿಕೊಳ್ಳುವುದಕ್ಕಾಗಿ ರೂಪಿಸಿರುವ ‘ವಿದ್ಯಾಗಮ’ ಈಗ ದೇಶದ ಗಮನ ಸೆಳೆದಿದ್ದು, ಬೇರೆ ರಾಜ್ಯಗಳಲ್ಲಿಯೂ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.

Advertisement

ಲಾಕ್‌ಡೌನ್‌ ಅವಧಿಯಲ್ಲಿ ಶಾಲಾ ಮಕ್ಕಳ ಕಲಿಕೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿದ ವಿದ್ಯಾಗಮ ಯೋಜನೆ ಕೇಂದ್ರ ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದೆ.

ವಿದ್ಯಾಗಮದ ವರದಿಯನ್ನು ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಪಡೆದುಕೊಂಡಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಈ ಯೋಜನೆಯನ್ನು ಪರಿಸ್ಥಿತಿಗೆ ತಕ್ಕಂತೆ ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ಸಲಹೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಯಾಕೆ ವಿದ್ಯಾಗಮ?
ಲಾಕ್‌ಡೌನ್‌ನಿಂದಾಗಿ ಮಾರ್ಚ್‌ನಿಂದ ಶಾಲೆಗಳಿಗೆ ರಜೆ ನೀಡಲಾಗಿತ್ತು. ಮಕ್ಕಳು ಮನೆಯಿಂದ ಹೊರಬರುವುದು ಕಷ್ಟವಾದ್ದರಿಂದ ಸರಕಾರಿ ಶಾಲಾ ಮಕ್ಕಳ ಕಲಿಕೆಯ ನಿರಂತರತೆ ಕಾಯ್ದುಕೊಳ್ಳುವುದು ಸವಾಲಾಗಿತ್ತು.
ತಜ್ಞರ ಸಮಿತಿಯ ಸಲಹೆ ಮತ್ತು ಶಿಫಾರಸಿನಂತೆ ಸರಕಾರಿ ಶಾಲಾ ಮಕ್ಕಳ ಕಲಿಕೆಗಾಗಿ ವಿದ್ಯಾಗಮ ಹುಟ್ಟಿಕೊಂಡಿತು. ಇದರಡಿ ಮಕ್ಕಳು ಇರುವಲ್ಲಿಗೆ ಶಿಕ್ಷಕರು ಹೋಗಿ ಪಾಠ ಮಾಡುತ್ತಿದ್ದಾರೆ.

Advertisement

ವಿದ್ಯಾಗಮದಿಂದ ಆಗುತ್ತಿರುವ ಅನುಕೂಲ ಮತ್ತು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹೇಗೆ ವಿದ್ಯಾಗಮವನ್ನು ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನ ಮಾಡಿದ್ದೇವೆ ಇತ್ಯಾದಿ ಅಂಶಗಳ ವಿಸ್ತೃತ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿದ್ಯಾಗಮದಲ್ಲಿ ಶಿಕ್ಷಕರು ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ, ಮಕ್ಕಳು ಇರುವಲ್ಲಿಗೆ ಶಿಕ್ಷಕರು ಹೋಗುತ್ತಾರೆ. ಇದನ್ನು ಸುಲಭವಾಗಿ ದೇಶಾದ್ಯಂತ ಅನುಷ್ಠಾನಕ್ಕೆ ತರಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಶಾಲೆ ಆರಂಭ ಇನ್ನಷ್ಟು ತಡ?
ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆ ಆರಂಭ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಪ್ರೌಢಶಾಲೆ ಅಥವಾ ಅನಂತರದ ತರಗತಿಗಳ ಬಗ್ಗೆ ಅಕ್ಟೋಬರ್‌ನಲ್ಲಿ ಸೂಕ್ತ ಮಾರ್ಗಸೂಚಿ ಕೇಂದ್ರದಿಂದ ಬರಬಹುದು. ಆದರೆ ಪ್ರಾಥಮಿಕ ಶಾಲಾ ಮಕ್ಕಳಿಗೆ ತರಗತಿ ಅಷ್ಟು ಬೇಗನೆ ಆರಂಭಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರಕಾರವು ವಿದ್ಯಾಗಮದ ಕೆಲವು ಅಂಶಗಳನ್ನು ದೇಶಾದ್ಯಂತ ಅನುಷ್ಠಾನಕ್ಕೆ ತರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು ವಿದ್ಯಾಗಮ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿ, ಬೇರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ.
– ಎಸ್‌. ಸುರೇಶ್‌ ಕುಮಾರ್‌, ಶಿಕ್ಷಣ ಸಚಿವರು

ವಿದ್ಯಾಗಮದ ಕುರಿತು ಕೇಂದ್ರ ಶಿಕ್ಷಣ ಇಲಾಖೆಯಿಂದ ಕೇಳಿರುವ ಎಲ್ಲ ವರದಿಗಳನ್ನು ಸಲ್ಲಿಸಿದ್ದೇವೆ. ಕರ್ನಾಟಕ ಸರಕಾರ ತೆಗೆದುಕೊಂಡಿರುವ ಈ ಕ್ರಮವನ್ನು ಕೇಂದ್ರ ಶಿಕ್ಷಣ ಇಲಾಖೆಯು ವಿವಿಧ ರಾಜ್ಯಗಳ ವೀಡಿಯೋ ಸಂವಾದದಲ್ಲಿ ಶ್ಲಾಘಿಸಿದೆ.
-ಡಾ| ಕೆ.ಜೆ. ಜಗದೀಶ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆಯುಕ್ತರು

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next