Advertisement
ಇತ್ತೀಚೆಗೆ ನಿಧನ ಹೊಂದಿದ ಮುಂಬಯಿ ಕನ್ನಡ ಸಾರಸ್ವತ ಲೋಕದ ತಾರೆಗಳಾದ ಮಧುರ ಕವಿ, ಕಾವ್ಯಶಿಲ್ಪಿ ದಿ| ಬಿ. ಎಸ್. ಕುರ್ಕಾಲ್, ವೈಚಾರಿಕ ಸಾಹಿತಿ ದಿ| ರವಿ ರಾ. ಅಂಚನ್, ರಂಗತಜ್ಞ ದಿ| ಎಚ್. ಕೆ. ಕರ್ಕೇರ ಅವರ ಕೃತಿ ಸಮೀಕ್ಷೆ ನಡೆಸುವ ಮೂಲಕ ಅಕ್ಷರಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಕೆ. ಸುಂದರ್ ಅವರು ವಹಿಸಿದ್ದರು.
Related Articles
Advertisement
ಆರಂಭದಲ್ಲಿ ಕವಿ ದಿ| ಕುರ್ಕಾಲರ ಗೀತೆಯ ಪ್ರಾರ್ಥನೆಯನ್ನು ವಾಸಂತಿ ಕೋಟೆಕಾರ್, ಸ್ನೇಹಾ ಕುಲಕರ್ಣಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾಧರ ಕನ್ನಡ ಪ್ರತಿಷ್ಠಾನದ ಸಂಚಾಲಕಿ ಹೇಮಾ ಸದಾನಂದ ಅಮೀನ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಷ್ಠಾನದ ಈವರೆಗಿನ ಕಾರ್ಯ ಹಾಗೂ ಧ್ಯೇಯ ಧೋರಣೆಗಳನ್ನು ಕನ್ನಡ ಕಾರ್ಯಕ್ಕೆ ಪ್ರತಿಷ್ಠಾನ ನಿರಂತರ ಬದ್ಧವಾಗಿದೆ ಎಂದು ಪ್ರತಿಷ್ಠಾನದ ಕಾರ್ಯವೈಖರಿ ವಿವರಿಸಿದರು. ಡಾ| ಲಿಗಾಡೆ ಪ್ರಶಸ್ತಿ, ಪ್ರತಿಭಾ ಗೌರವ, ಸಾಧಕರನ್ನು ಗುರುತಿಸುವ, ಹೀಗೆ ಪ್ರತಿಭೆಗಳಿಗೆ ವೇದಿಕೆ ನೀಡುವುದೂ ಇದರ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಎಸ್. ಕೆ. ಸುಂದರ್ ಅವರು ಕವಿ ಬಿ. ಎಸ್. ಕುರ್ಕಾಲರ ತಮ್ಮ ಒಡನಾಟ ಸ್ಮರಿಸಿ, ದಿ| ರವಿ ರಾ. ಅಂಚನ್ ದಿ| ಕರ್ಕೇರ ಅವರ ಬಗೆಗೆ ಅವರ ಸಾಹಿತ್ಯ ರಚನೆಗಳ ಬಗೆಗೆ ತಮ್ಮ ಅನುಭವದ ಕಥನಗಳನ್ನು ತಿಳಿಸುತ್ತ, ಈ ಮೂವರ ಅಗಲುವಿಕೆ ಮುಂಬಯಿ ಕನ್ನಡ ಸಾರಸ್ವತ ಲೋಕಕ್ಕೆ ಹಾನಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ರಮೇಶ ಶೆಟ್ಟಿ ಪಯ್ನಾರು ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಬರಿದೇ ಮೌನ ಪ್ರಾರ್ಥನೆ ಸಲ್ಲಿಸುವುದಕ್ಕಿಂತ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲುವುದೇ ನಿಜವಾದ ಶ್ರದ್ಧಾಂಜಲಿಯಾಗಿದೆ. ವಿದ್ಯಾಧರ ಕನ್ನಡ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಮೀನಾ ಕಾಳಾವರ ಅವರು ಈ ಸಂದರ್ಭದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಮಂಡ್ಯ ಕಾರ್ಯಕ್ರಮದ ತಮ್ಮ ಸವಿ ನೆನಪುಗಳನ್ನು ನೆನಪಿಸಿಕೊಂಡರು.
ಬಿ. ಎಸ್. ಕುರ್ಕಾಲ್ ಅವರ ಅಳಿಯ ಜಯರಾಮ್ ಶೆಟ್ಟಿ, ಜೆ. ಎಂ. ಕೋಟ್ಯಾನ್, ಕೇಶವ್ ಕೋಟ್ಯಾನ್, ಚಿತ್ರಾಪು ಕೋಟ್ಯಾನ್, ಎಸ್. ಎಂ. ಶೆಟ್ಟಿ ಹಾಗೂ ಇನ್ನಿತರ ಹಿರಿಯ ವ್ಯಕ್ತಿಗಳ ಉಪಸ್ಥಿತರಿದ್ದರು. ವಾಣಿ ಶೆಟ್ಟಿ ಅವರು ಕಾರ್ಯಕ್ರಮದ ನಿರ್ವಹಿಸಿದರು. ಪ್ರೇಮಾ ಪೂಜಾರಿ ವಂದಿಸಿದರು.