ಕೃಷಿ ಇಲಾಖೆ ವತಿಯಿಂದ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯ ವೇತನ ಯೋಜನೆ ಜಾರಿಗೆ ತರಲಾಗಿದೆ. ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯನ್ನು ಪೂರ್ಣಗೊಳಿಸಿದ ಅನಂತರ ರಾಜ್ಯದ ಯಾವುದೇ ಭಾಗದಲ್ಲಿರುವ, ಅಧಿಕೃತವಾಗಿ ನೋಂದಣಿಯಾ ಗಿರುವ ಶಿಕ್ಷಣ ಸಂಸ್ಥೆಗಳು/ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತರ ಕೋರ್ಸ್‌ಗಳವರೆಗೆ ಪ್ರವೇಶವನ್ನು ಪಡೆದಿರುವ ಕರ್ನಾಟಕ ರಾಜ್ಯದ ರೈತರ ಅರ್ಹ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಪದ್ಧತಿಯ ಮೂಲಕ 2021-22ನೇ ಆರ್ಥಿಕ ವರ್ಷದ ಸಾಲಿನಿಂದ ಜಾರಿಗೆ ಬರುವಂತೆ ವಾರ್ಷಿಕ ಶಿಷ್ಯ ವೇತನ ರೂಪದಲ್ಲಿ ಒದಗಿಸಲಾಗುವುದು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದಡಿ ನೀಡಲಾಗುವ ವಾರ್ಷಿಕ ಶಿಷ್ಯ ವೇತನದ ವಿವರ: ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂ., ವಿದ್ಯಾರ್ಥಿನಿಯರಿಗೆ/ಅನ್ಯ ಲಿಂಗದವರು, 3 ಸಾವಿರ ರೂ., ಬಿ.ಎ, ಬಿ.ಎಸ್.ಸಿ, ಬಿ.ಕಾಂ ಇನ್ನಿತರೆ ಪದವಿ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ 5 ಸಾವಿರ ರೂ., ವಿದ್ಯಾರ್ಥಿನಿಯರಿಗೆ/ಅನ್ಯ ಲಿಂಗದವರು 5,500 ರೂ., ಎಲ್‌ಎಲ್‌ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸಿಂಗ್ ಇನ್ನಿತರೆ ವೃತ್ತಿ ಪರ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ 7,500 ರೂ., ವಿದ್ಯಾರ್ಥಿನಿಯರಿಗೆ/ ಅನ್ಯ ಲಿಂಗದವರಿಗೆ 8 ಸಾವಿರ ರೂ., ಎಂಬಿಬಿಎಸ್, ಬಿ.ಇ, ಬಿ.ಟೆಕ್ ಮತ್ತು ಎಲ್ಲ ಸ್ನಾತಕೋತ್ತರ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ 10 ಸಾವಿರ ರೂ., ವಿದ್ಯಾರ್ಥಿನಿಯರಿಗೆ/ಅನ್ಯ ಲಿಂಗದವರಿಗೆ 11 ಸಾವಿರ ರೂ.
ಅರ್ಹತೆ: ವಿದ್ಯಾರ್ಥಿಯು ರೈತರ ಮಕ್ಕಳಾಗಿರಬೇಕು. ವಿದ್ಯಾರ್ಥಿಯ ತಂದೆ ಅಥವಾ ತಾಯಿಯು ರೈತರ ಗುರುತಿನ ಸಂಖ್ಯೆ ಹೊಂದಿರಬೇಕು. ಒಂದು ಪಕ್ಷ ಯಾವುದೇ ಮಕ್ಕಳಿಗೆ ಹೆತ್ತವರು, ಹೆತ್ತವರು ಇಲ್ಲದೇ ಇದ್ದ ಸಂದರ್ಭದಲ್ಲಿ ಉಳುಮೆ ಮಾಡುವಂತಹ/ಕೃಷಿ ಮಾಡುವಂತಹ ಜಮೀನಿನನ್ನು ಅವರು ಹೊಂದಿರಬೇಕು.
ಈ ರೈತರ ಮಕ್ಕಳು ರಾಜ್ಯದ ಅನುದಾನದಿಂದ ಪಾವತಿಸುವಂತಹ ಒಂದು ಶಿಷ್ಯ ವೇತನಕ್ಕೆ ಮಾತ್ರ ಅರ್ಹರಾಗುತ್ತಾರೆ. ಆದರೆ ಮೆರಿಟ್, ಅರ್ಹತಾ ಪರೀಕ್ಷೆ, ಶೈಕ್ಷಣಿಕ ಪರೀಕ್ಷೆಗಳಲ್ಲಿ ರ್‍ಯಾಂಕ್ ಮತ್ತಿತರ ಆಧಾರದ ಮೇಲೆ ಪಡೆಯುವ ಶಿಷ್ಯ ವೇತನ, ಪ್ರಶಸ್ತಿ, ಪ್ರತಿಫಲ ಇವುಗಳನ್ನು ರೈತರ ಮಕ್ಕಳು ಪಡೆದಿದ್ದರೂ ಈ ಶಿಷ್ಯ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ. ರೈತರ ಮಕ್ಕಳ ತಂದೆ-ತಾಯಿ ಇಬ್ಬರೂ ಕೃಷಿ ಜಮೀನಿನ ಒಡೆಯರಾಗಿದ್ದರೆ, ಈ ಯೋಜನೆಯಲ್ಲಿ ಒಂದು ಶಿಷ್ಯ ವೇತನಕ್ಕೆ ಮಾತ್ರ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಈ ಶಿಷ್ಯ ವೇತನವು ಶಿಕ್ಷಣದ ಯಾವುದೇ ಕೋರ್ಸಿನ ಸೆಮಿಸ್ಟರ್/ ಶೈಕ್ಷಣಿಕ ವರ್ಷಗಳಿಗೆ ಮಿತಿಯಾಗಿರತಕ್ಕದ್ದು. ಕೋರ್ಸ್ ಸೆಮಿಸ್ಟರ್/ಶೈಕ್ಷಣಿಕ ವರ್ಷದಲ್ಲಿ ವಿದ್ಯಾಭ್ಯಾಸದ ಪುನರಾ ವರ್ತನೆಯಾದರೆ (ಪುನಃ ಪರೀಕ್ಷೆ ತೆಗೆದುಕೊಂಡರೆ )ವಿದ್ಯಾರ್ಥಿಗಳು ಶಿಷ್ಯವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಈ ಶಿಷ್ಯ ವೇತನವನ್ನು ಯಾವುದಾದರೂ ಒಂದು ವಿಧದ ಕೋರ್ಸ್‌ಗೆ ನೀಡಲಾಗುವುದು.
ಈ ಶಿಷ್ಯವೇತನವನ್ನು ಕರ್ನಾಟಕ ರಾಜ್ಯದ ಎಲ್ಲ ವರ್ಗದ ರೈತರ ಮಕ್ಕಳು ರಾಜ್ಯದ ಇತರ ಯಾವುದೇ (ಎಸ್ಸಿ, ಎಸ್ಟಿ, ಒಬಿಸಿ, ಮೈನಾರಿಟಿ) ಶಿಷ್ಯ ವೇತನವನ್ನು ಪಡೆಯಲು ಆಗದಿದ್ದಲ್ಲಿ, ರೈತರ ಮಕ್ಕಳ ಶಿಷ್ಯ ವೇತನಕ್ಕೆ ಸಂಪರ್ಕಿಸಬೇಕಾದ ವೆಬ್ ವಿಳಾಸ: //ssp.postmateric.karnataka.gov.in ಈ ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅಲ್ಲದೆ, ವಿದ್ಯಾರ್ಥಿಗಳು ತೆರೆದ ಬ್ಯಾಂಕ್ ಖಾತೆಗಳನ್ನು ಕಡ್ಡಾಯವಾಗಿ ಆಧಾರ್ ಜೋಡಣೆ ಮಾಡಿಸುವುದರೊಂದಿಗೆ ಎನ್‌ಪಿಸಿಐ (NPCI) ಜೋಡಣೆ ಕೂಡ ಮಾಡಿಸುವುದು ಕಡ್ಡಾಯ ವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.
-ಆರ್.ಕೆ.ಬಾಲಚಂದ್ರ