ಬೆಂಗಳೂರು: ಕರ್ನಾಟಕದ ಟಿ20 ಕ್ರಿಕೆಟ್ ಟೂರ್ನಮೆಂಟ್ ಮಹಾರಾಜ ಟ್ರೋಫಿ ಕ್ರಿಕೆಟ್ (Maharaja T20 KSCA tournament) ಪಂದ್ಯಾವಳಿಯು ಆರಂಭವಾಗಿದೆ. ಇದೇ ಮೊದಲ ಬಾರಿಗೆ ಭಾರತ ತಂಡದ ಮಾಜಿ ನಾಯಕ, ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ (Samit Dravid) ಅವರು ಇದೇ ಮೊದಲ ಬಾರಿಗೆ ಮಹಾರಾಜ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಮೈಸೂರು ವಾರಿಯರ್ಸ್ ತಂಡದ ಪರವಾಗಿ ಕಣಕ್ಕಿಳಿದಿರುವ ಸಮಿತ್, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದ್ದರು.
ಸಮಿತ್ ಅವರ ಶಾಟ್ ಮತ್ತು ದೇಹದ ಭಂಗಿಯು ಅಭಿಮಾನಿಗಳಿಗೆ ಅವರ ತಂದೆ ರಾಹುಲ್ ಅವರನ್ನು ನೆನಪಿಸಿತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ ಸಮಿತ್ ದೊಡ್ಡ ಸ್ಕೋರ್ ಗಳಿಸಲು ವಿಫಲರಾದರು. ಒಂದು ಸಿಕ್ಸರ್ ಬಾರಿಸಿದರೂ ಅವರು ಒಟ್ಟು ಗಳಿಸಿದ್ದು ಏಳು ರನ್ ಮಾತ್ರ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ನಾಲ್ಕು ವಿಕೆಟ್ ಗಳಿಂದ ಸೋಲು ಕಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ 18 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಮೈಸೂರು ಪರವಾಗಿ ಹರ್ಷಿಲ್ ಧರ್ಮಾನಿ 50 ರನ್ ಗಳಿಸಿದರೆ, ಮನೋಜ್ ಭಾಂಡಗೆ ಅಜೇಯ 58 ರನ್ ಗಳಿಸಿದರು. ಗುರಿ ಬೆನ್ನತ್ತಿದ್ದ ಬೆಂಗಳೂರು ತಂಡ ಪರವಾಗಿ ಭುವನ್ ರಾಜು 51 ರನ್, ಎಲ್ ಆರ್ ಚೇತನ್ 33 ರನ್, ಸೂರಜ್ ಅಹುಜಾ 39 ರನ್ ಗಳಿಸಿದರು.